ಬೆಂಗಳೂರು: ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಡೆಸಿದ ಮತ್ತೊಂದು ಸುತ್ತಿನ ಸಂಧಾನ ಮಾತುಕತೆ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮೇ 20ರ ಬುಧವಾರದಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗುವುದು ಬಹುತೇಕ ಖಚಿತವಾಗಿದೆ.
ಸಾರಿಗೆ ನೌಕರರ ವಿವಿಧ ಸಂಘಟನೆಗಳ ಒಕ್ಕೂಟವಾಗಿರುವ ಜಂಟಿ ಕ್ರಿಯಾ ಸಮಿತಿಯು ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಸೋಮವಾರ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು. ಕಾರ್ಮಿಕ ಇಲಾಖೆಯ ಆಯುಕ್ತರಾದ ದಿನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು. ಆದರೆ, ಬೇಡಿಕೆಗಳ ಈಡೇರಿಕೆಯ ಕುರಿತು ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಸಿಗದ ಕಾರಣ, ಸಮಿತಿಯ ಪದಾಧಿಕಾರಿಗಳನ್ನು ಮನವೊಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ಕೇವಲ ಹಾರಿಕೆ ಉತ್ತರದ ಭರವಸೆ ನೀಡುತ್ತಿದೆ. ಹೀಗಾಗಿ ಮೇ 20ರಿಂದ ಕರೆ ನೀಡಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನೌಕರರ ಸಂಘಟನೆ ತಿಳಿಸಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಸಿಬ್ಬಂದಿಗೆ ಕಠಿಣ ನೋಟಿಸ್ ಜಾರಿ ಮಾಡಿದೆ. ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸದೆ ಸಾರ್ವಜನಿಕ ಸೇವೆಗೆ ಲಭ್ಯವಿರಬೇಕು ಮತ್ತು ದೈನಂದಿನ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಆದೇಶಿಸಲಾಗಿದೆ. ಒಂದು ವೇಳೆ ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಗೈರುಹಾಜರಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ವೇತನ ಕಡಿತ (No Work, No Pay) ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ ಸರ್ಕಾರದ ಈ ಬೆದರಿಕೆಗೆ ನೌಕರರ ಸಂಘಟನೆಗಳು ಬಗ್ಗುತ್ತಿಲ್ಲ.
ಮಂಗಳವಾರ ಮಧ್ಯಾಹ್ನದೊಳಗೆ ಮುಖ್ಯಮಂತ್ರಿಗಳು ಅಥವಾ ಸಾರಿಗೆ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ತೀರ್ಮಾನ ಕೈಗೊಂಡರೆ ಮಾತ್ರ ಮುಷ್ಕರ ವಾಪಸ್ ಪಡೆಯಲಾಗುವುದು. ಇಲ್ಲದಿದ್ದರೆ ಬುಧವಾರದಿಂದ ಬಸ್ ಸಂಚಾರ ಸ್ಥಗಿತಗೊಳ್ಳುವುದು ಖಚಿತ” ಎಂದು ನೌಕರರ ಸಂಘಟನೆಯ ಜಂಟಿ ಸಮಿತಿ ಸದಸ್ಯರಾದ ವಿಜಯ್ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಮಂಗಳವಾರ ಮಧ್ಯಾಹ್ನದೊಳಗೆ ಸರ್ಕಾರದಿಂದ ಯಾವುದೇ ಬಲವಾದ ನಿರ್ಧಾರ ಬಾರದಿದ್ದರೆ, ಬುಧವಾರದಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸಂಕಷ್ಟ ಎದುರಾಗುವುದು ಗ್ಯಾರಂಟಿ ಎನ್ನಲಾಗಿದೆ.








