ಕೋಲಾರ : ಪೋಷಕರು ತಿನ್ನುವ ಸಲುವಾಗಿ ಇಟ್ಟಿದ್ದ ಬೆಟ್ಟದ ನೆಲ್ಲಿಕಾಯಿಯನ್ನು ತಿನ್ನಲು ಹೋಗಿ, ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಎರಡು ವರ್ಷದ ಗಂಡು ಮಗುವೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದಿದೆ.
ರವಿ ಮತ್ತು ಮಾಲಾ ದಂಪತಿಯ 2 ವರ್ಷದ ಮಗು ವಿಜಯೇಂದ್ರ ಮೃತಪಟ್ಟ ದುರ್ದೈವಿ. ಮಗು ಬೆಟ್ಟದ ನೆಲ್ಲಿಕಾಯಿಯನ್ನು ನುಂಗಲು ಹೋದಾಗ ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ಮಗು ಉಸಿರಾಡಲು ಸಾಧ್ಯವಾಗದೆ ಒದ್ದಾಡುತ್ತಿರುವುದನ್ನು ಪೋಷಕರು ಗಮನಿಸಿದ್ದಾರೆ.
ಕೂಡಲೇ ಮಗುವನ್ನು ರಕ್ಷಿಸಲು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ. ಪಟ್ಟಣದಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡುವ ರವಿ-ಮಾಲಾ ದಂಪತಿ, ಮದುವೆಯಾಗಿ ಎಂಟು ವರ್ಷಗಳ ನಂತರ ತಮಗ ಹುಟ್ಟಿದ್ದ ಮಗುವನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದಾರೆ.








