ಇದರ ಅನ್ವಯ, ಸಾರ್ವಜನಿಕರು ಯಾವುದೇ ಶುಲ್ಕವಿಲ್ಲದೆ ತಮ್ಮ ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು 2027ರ ಜೂನ್ 14ರವರೆಗೆ ಕಾಲಾವಕಾಶ ನೀಡಲಾಗಿದೆ. ನಾಗರಿಕರಿಂದ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆಯನ್ನು ಪರಿಗಣಿಸಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೇ 13, 2026 ರಂದು ಹೊರಡಿಸಲಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಉಚಿತ ಸೌಲಭ್ಯವು ಕೇವಲ ಆನ್‌ಲೈನ್ ಪೋರ್ಟಲ್ (https://myaadhaar.uidai.gov.in/) ಮೂಲಕ ಮಾಡುವ ಅಪ್‌ಡೇಟ್‌ಗಳಿಗೆ ಮಾತ್ರ ಅನ್ವಯಿಸಲಿದೆ.
ಹಳೆಯ ‘mAadhaar’ ಆಪ್ ಸ್ಥಗಿತ: ಹೊಸ ಆಪ್ ಬಿಡುಗಡೆ ಇದರೊಂದಿಗೆ ಡಿಜಿಟಲ್ ಗುರುತಿನ ನಿರ್ವಹಣೆಯನ್ನು ಮತ್ತಷ್ಟು ಸುಲಭಗೊಳಿಸಲು ಯುಐಡಿಎಐ ಮಹತ್ವದ ಬದಲಾವಣೆ ತಂದಿದೆ. ಸದ್ಯ ಬಳಕೆಯಲ್ಲಿರುವ ಹಳೆಯ ‘mAadhaar’ ಆಪ್ ಅನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಬಳಕೆದಾರರು ಹೆಚ್ಚು ಸುರಕ್ಷಿತ ಹಾಗೂ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಆಧಾರ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಹೊಸ ಆಪ್‌ನಲ್ಲಿ ಕ್ಯುಆರ್ ಕೋಡ್ (QR Code) ಆಧಾರಿತ ಆಧಾರ್ ಹಂಚಿಕೆ, ಸುಧಾರಿತ ಗೌಪ್ಯತೆ ನಿಯಂತ್ರಣಗಳು ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ.
ಹೊಸ ಆಪ್‌ಗೆ ಭಾರಿ ಜನಪ್ರಿಯತೆ: ಕೇಂದ್ರ ಐಟಿ ಸಚಿವಾಲಯದ ಮಾಹಿತಿ ಪ್ರಕಾರ, ಈ ಹೊಸ ಆಧಾರ್ ಆಪ್ ಬಿಡುಗಡೆಯಾದ ಕೇವಲ ಮೂರು ತಿಂಗಳಲ್ಲೇ 2.1 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ಈ ಹೊಸ ಆಪ್ ಮೂಲಕ ಈಗಾಗಲೇ 28 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತು ಸುಮಾರು 6 ಲಕ್ಷ ಜನರು ತಮ್ಮ ವಿಳಾಸವನ್ನು ಯಶಸ್ವಿಯಾಗಿ ನವೀಕರಿಸಿದ್ದಾರೆ. ಈ ಆಪ್ ಆಂಡ್ರಾಯ್ಡ್ ಮತ್ತು ಆಪಲ್ ಐಒಎಸ್ (iOS) ಎರಡು ಪ್ಲಾಟ್‌ಫಾರ್ಮ್‌ಗಳಲ್ಲೂ ಲಭ್ಯವಿದೆ.
ಹತ್ತು ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಗುರುತಿನ ಮತ್ತು ವಿಳಾಸದ ಪುರಾವೆಗಳನ್ನು ನವೀಕರಿಸಿಕೊಳ್ಳುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.