ಜಿನೀವಾ: ಅಟ್ಲಾಂಟಿಕ್ ಸಾಗರದಲ್ಲಿ ಸಾಗುತ್ತಿದ್ದ ಕ್ರೂಸ್ ಶಿಪ್ವೊಂದರಲ್ಲಿ ಪತ್ತೆಯಾದ ‘ಹಂಟಾವೈರಸ್’ (Hantavirus) ಹರಡುವಿಕೆ ಬಗ್ಗೆ ಜಾಗತಿಕವಾಗಿ ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮಹತ್ವದ ಸ್ಪಷ್ಟನೆ ನೀಡಿದೆ. ಹಂಟಾವೈರಸ್ ಮತ್ತೊಂದು ಕೋವಿಡ್ ಮಾದರಿಯ ಸಾಂಕ್ರಾಮಿಕವಲ್ಲ ಮತ್ತು ಸಾರ್ವಜನಿಕರಿಗೆ ಇದರಿಂದ ಇರುವ ಅಪಾಯ ತುಂಬಾ ಕಡಿಮೆ ಎಂದು ಸಂಸ್ಥೆ ತಿಳಿಸಿದೆ.
“ನಾನು ಇಲ್ಲಿ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ಇದು ಸಾರ್ಸ್-ಕೋವ್-2 (ಕೋವಿಡ್) ಅಲ್ಲ. ಆರು ವರ್ಷಗಳ ಹಿಂದೆ ನಾವು ಎದುರಿಸಿದ್ದ ಪರಿಸ್ಥಿತಿ ಈಗಿಲ್ಲ” ಎಂದು WHO ನಿರ್ದೇಶಕಿ ಮಾರಿಯಾ ವ್ಯಾನ್ ಕೆರ್ಖೋವ್ ಭರವಸೆ ನೀಡಿದ್ದಾರೆ.
ಕೋವಿಡ್ ಗಾಳಿಯ ಮೂಲಕ ಸುಲಭವಾಗಿ ಹರಡುತ್ತಿತ್ತು. ಆದರೆ, ಹಂಟಾವೈರಸ್ ಮುಖ್ಯವಾಗಿ ಇಲಿಗಳಂತಹ ದಂಶಕಗಳಿಂದ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಇದು ಹರಡುವುದು ಅತ್ಯಂತ ಅಪರೂಪ ಮತ್ತು ಅದಕ್ಕೆ ಅತಿ ಹತ್ತಿರದ ಸಂಪರ್ಕದ ಅಗತ್ಯವಿರುತ್ತದೆ.
ಪ್ರಸ್ತುತ ಉಂಟಾಗಿರುವ ಹರಡುವಿಕೆಯು ಕೇವಲ ಒಂದು ಹಡಗಿಗೆ ಸೀಮಿತವಾಗಿದ್ದು, ಜಾಗತಿಕವಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಇದು ದೊಡ್ಡ ಪರಿಣಾಮ ಬೀರದು ಎಂದು WHO ಅಂದಾಜಿಸಿದೆ.








