ನವದೆಹಲಿ: ಸಂಭವನೀಯ ಭಯೋತ್ಪಾದಕ ದಾಳಿಯ ಎಚ್ಚರಿಕೆಯ ಹಿನ್ನೆಲೆಯಲ್ಲಿ, ನವದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಚೇರಿ ಮತ್ತು ಹಲವಾರು ಸರ್ಕಾರಿ ಸಂಸ್ಥೆಗಳ ಬಳಿ ಶನಿವಾರ ಭದ್ರತೆಯನ್ನು ತೀವ್ರಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕೇಂದ್ರ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಸರ್ಕಾರಿ ಕಚೇರಿಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬಾಂಬ್ ದಾಳಿಗಳು, ಐಇಡಿ (IED) ಬೆದರಿಕೆಗಳು ಅಥವಾ ಗುಂಡಿನ ದಾಳಿ ಸೇರಿದಂತೆ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಮತ್ತು ಭೀತಿ ಸೃಷ್ಟಿಸುವ ಪ್ರಯತ್ನಗಳನ್ನು ಹತ್ತಿಕ್ಕಲು ರಕ್ಷಣಾ ಸಂಸ್ಥೆಗಳನ್ನು ‘ಹೈ ಅಲರ್ಟ್’ನಲ್ಲಿ ಇರಿಸಲಾಗಿದೆ ಹಾಗೂ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
”ದೆಹಲಿ ರಾಜ್ಯ ಬಿಜೆಪಿ ಕಚೇರಿ ಮತ್ತು ಡಿಡಿಯು ಮಾರ್ಗದಲ್ಲಿರುವ ಸರ್ಕಾರಿ ಕಚೇರಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂಭವನೀಯ ಬೆದರಿಕೆಗಳನ್ನು ಎದುರಿಸಲು ಭದ್ರತೆಯನ್ನು ಹೆಚ್ಚಿಸಲಾಗಿದ್ದು, ರಕ್ಷಣಾ ಸಂಸ್ಥೆಗಳನ್ನು ಜಾಗೃತಗೊಳಿಸಲಾಗಿದೆ,” ಎಂದು ಮೂಲವೊಂದು ತಿಳಿಸಿದೆ.








