ಏಲೂರು: ದೃಶ್ಯಂ ಸಿನಿಮಾ ಸ್ಟೈಲ್ನಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕೊಲೆ ಮಾಡಿ, ಆಕೆ ಬದುಕಿದ್ದಾಳೆ ಎಂದು ನಂಬಿಸಲು ಆಕೆಯ ಫೋನ್ ನಿಂದಲೇ ಪತಿಗೆ ವಾಟ್ಸಾಪ್ ಮೆಸೇಜ್ ಕಳುಹಿಸುತ್ತಿದ್ದ ಆರೋಪಿಯ ನಾಟಕವನ್ನು ಆಂಧ್ರಪ್ರದೇಶದ ಪೊಲೀಸರು ಬಯಲಿಗೆಳೆದಿದ್ದಾರೆ.
ಅಕ್ರಮ ಸಂಬಂಧದಲ್ಲಿ ಉಂಟಾದ ಅನುಮಾನ ಹಾಗೂ ಹಣಕಾಸಿನ ವಿವಾದವೇ ಈ ಭೀಕರ ಕೊಲೆಗೆ ಕಾರಣವಾಗಿದೆ. ನಂಬಿಸಿ ಪ್ರಾಣ ತೆಗೆದು, ಶವವನ್ನು ಹೂತುಹಾಕಿ ಡ್ರಾಮಾ ಮಾಡುತ್ತಿದ್ದ ಆರೋಪಿಯನ್ನು ಏಲೂರು ತ್ರೀ ಟೌನ್ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಏಲೂರು ತ್ರೀ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸೌರಿಪುರಂ ಗ್ರಾಮದ ಮಲ್ಲವಲ್ಲಿ ವಿಶಾಲಿ (36) ಎಂಬ ವಿವಾಹಿತೆ, ಏಪ್ರಿಲ್ 18 ರಂದು ಗುಡಿವಾಡದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಆಕೆ ಎಷ್ಟು ದಿನ ಕಳೆದರೂ ಮನೆಗೆ ಮರಳದಿದ್ದಾಗ ಮತ್ತು ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದರು.
ಪತಿಯ ದೂರಿನ ಮೇರೆಗೆ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ತ್ರೀ ಟೌನ್ ಸಿಐ ಕೋಟೇಶ್ವರರಾವ್ ಮತ್ತು ಎಸ್ಐ ರಾಂಬಾಬು ನೇತೃತ್ವದ ತಂಡ ಆಧುನಿಕ ತಂತ್ರಜ್ಞಾನವನ್ನು ಬಳಸಿ ತನಿಖೆ ಕೈಗೆತ್ತಿಕೊಂಡಿತು. ಮೃತರ ಮೊಬೈಲ್ ಕರೆಗಳ ಡೇಟಾವನ್ನು (CDR) ವಿಶ್ಲೇಷಿಸಿದಾಗ, ಅದೇ ಗ್ರಾಮದ ದರ್ಶನ್ ಫ್ರಾನ್ಸಿಸ್ ಶೌರಿ (36) ಎಂಬ ಹಾಲು ವ್ಯಾಪಾರಿಯೊಂದಿಗೆ ಆಕೆ ನಿರಂತರವಾಗಿ ಸಂಪರ್ಕದಲ್ಲಿದ್ದದ್ದು ಪತ್ತೆಯಾಯಿತು. ಇದೇ ಸಮಯದಲ್ಲಿ ಫ್ರಾನ್ಸಿಸ್ ಕೂಡ ನಾಪತ್ತೆಯಾಗಿದ್ದರಿಂದ ಪೊಲೀಸರ ಅನುಮಾನ ಮತ್ತಷ್ಟು ಬಲಪಟ್ಟಿತು.
ಅಕ್ರಮ ಸಂಬಂಧ ಮತ್ತು ಅನುಮಾನವೇ ಮುಳುವಾಯಿತು!
ಪೊಲೀಸರ ವಿಚಾರಣೆಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಆರೋಪಿ ಫ್ರಾನ್ಸಿಸ್, ಮೃತ ವಿಶಾಲಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಾಲ ನೀಡಿ ಬಡ್ಡಿ ವಸೂಲಿ ಮಾಡುತ್ತಿದ್ದ. ಈ ಹಣಕಾಸಿನ ವಹಿವಾಟಿನ ಸಂದರ್ಭದಲ್ಲಿ ಇಬ್ಬರ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಆದರೆ, ವಿಶಾಲಿ ತನ್ನೊಂದಿಗಷ್ಟೇ ಅಲ್ಲದೆ ಬೇರೆಯವರ ಜೊತೆಯೂ ಫೋನ್ ನಲ್ಲಿ ಮಾತನಾಡುತ್ತಿದ್ದಾಳೆ ಎಂದು ಫ್ರಾನ್ಸಿಸ್ ಅನುಮಾನ ಪಡಲಾರಂಭಿಸಿದ್ದ. ಇದರಿಂದ ಆಕೆಯನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಕ್ರೂರ ಯೋಜನೆ ರೂಪಿಸಿದ್ದ.
ಯೋಜನೆಯ ಪ್ರಕಾರ, ಏಪ್ರಿಲ್ 18 ರಂದು ಹಣ ನೀಡುವುದಾಗಿ ನಂಬಿಸಿ ವಿಶಾಲಿಯನ್ನು ಹನುಮಾನ್ ಜಂಕ್ಷನ್ ಬಳಿ ಕರೆಸಿಕೊಂಡಿದ್ದ. ಅಲ್ಲಿಂದ ಆಕೆಯನ್ನು ತನ್ನ ಬೈಕ್ನಲ್ಲಿ ಕೂರಿಸಿಕೊಂಡು ನೂಜಿವೀಡು ಮಂಡಲದ ಪಲ್ಲೆರ್ಲಮೂಡಿ ಸಮೀಪವಿರುವ ಪೋಲವರಂ ಕಾಲುವೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ಜಗಳ ನಡೆದಾಗ, ಆಕೆಯ ಮೇಲೆ ದಾಳಿ ಮಾಡಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಆಕೆ ಸತ್ತಿದ್ದಾಳೆ ಎಂದು ಖಚಿತಪಡಿಸಿಕೊಳ್ಳಲು ದೊಡ್ಡ ಕಲ್ಲಿನಿಂದ ಎದೆಯ ಮೇಲೆ ಬಲವಾಗಿ ಜಜ್ಜಿ, ಶವವನ್ನು ಅಲ್ಲಿನ ಪೊದೆಗಳಲ್ಲಿ ಎಸೆದು ಪರಾರಿಯಾಗಿದ್ದ.
ಶವ ಹೂತುಹಾಕಿ ‘ದೃಶ್ಯಂ’ ಮಾದರಿ ಹೈಡ್ರಾಮಾ
ಕೊಲೆ ಮಾಡಿದ 5 ದಿನಗಳ ನಂತರ, ಅಂದರೆ ಏಪ್ರಿಲ್ 23 ರಂದು ಆರೋಪಿ ಮತ್ತೆ ಘಟನಾ ಸ್ಥಳಕ್ಕೆ ಹೋಗಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಅಲ್ಲಿ ಆಳವಾದ ಗುಂಡಿ ತೋಡಿ ಶವವನ್ನು ಹೂತುಹಾಕಿದ್ದಾನೆ. ಆ ಬಳಿಕ ಆಕೆಯ ಬಟ್ಟೆ ಹಾಗೂ ಇತರ ವಸ್ತುಗಳನ್ನು ಸುಟ್ಟುಹಾಕಿ ಸಾಕ್ಷ್ಯ ನಾಶಪಡಿಸಿದ್ದಾನೆ.
ಅಷ್ಟಕ್ಕೇ ನಿಲ್ಲದ ಆತ ಪೊಲೀಸರು ಮತ್ತು ಕುಟುಂಬಸ್ಥರನ್ನು ಹಾದಿ ತಪ್ಪಿಸಲು ಹೈಡ್ರಾಮಾ ಶುರು ಮಾಡಿದ್ದಾನೆ. ವಿಶಾಲಿ ಬದುಕಿದ್ದಾಳೆ ಎಂದು ಬಿಂಬಿಸಲು ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣಿಸುತ್ತಾ, ಆಕೆಯ ಫೋನ್ನಿಂದಲೇ ಪತಿಗೆ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಲು ಪ್ರಾರಂಭಿಸಿದ್ದಾನೆ. ಕೆಲವೊಮ್ಮೆ ಫೋನ್ ರಿಂಗ್ ಆದಾಗ ರಿಸೀವ್ ಮಾಡಿ ಮಾತನಾಡದೆ ಸೈಲೆಂಟ್ ಆಗಿರುತ್ತಿದ್ದ. ಕೊನೆಗೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಫೋನ್ ಪುಡಿಪುಡಿ ಮಾಡಿ ಕೆರೆಗೆ ಎಸೆದಿದ್ದ.
ತಾಂತ್ರಿಕ ಸಾಕ್ಷ್ಯಾಧಾರಗಳ ಸಹಾಯದಿಂದ ಆರೋಪಿಯ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಏಲೂರು ಪೊಲೀಸರು, ಹೌಸಿಂಗ್ ಬೋರ್ಡ್ ಕಾಲೋನಿ ಬಳಿ ಫ್ರಾನ್ಸಿಸ್ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ತನ್ನ ಘೋರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ವಿಶಾಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಪಕ್ಕಾ ಸಾಕ್ಷ್ಯಾಧಾರಗಳೊಂದಿಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ಗೆ ಒಪ್ಪಿಸಲಾಗಿದೆ.








