ಮಂಡ್ಯ :- ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಯಾರಿಗೂ ಸಹ ಲಾಬಿ ಮಾಡುತ್ತಿಲ್ಲ ಹಾಗೂ ನನಗೆ ಅದರ ಮೇಲೆ ಆಸೆಯೂ ಇಲ್ಲ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಶನಿವಾರ ಸ್ಪಷ್ಟಪಡಿಸಿದರು.
ಮದ್ದೂರು ತಾಲೂಕಿನ ಅಣ್ಣೂರು ಮತ್ತು ಚಂದೂಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು 6 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಹೀಗಾಗಿ ನಾನು ಯಾವುದೇ ಸ್ಥಾನಮಾನಗಳನ್ನು ನೀಡಿ ಎಂದು ಪಕ್ಷದ ವರಿಷ್ಠರ ಬಳಿ ಬೇಡಿಕೆ ಇಟ್ಟಿಲ್ಲ. ಪಕ್ಷದಲ್ಲಿ 140 ಮಂದಿ ಶಾಸಕರಲ್ಲಿ 100 ಕ್ಕೂ ಹೆಚ್ಚು ಮಂದಿ ಹಿರಿಯ ಶಾಸಕರು ಇದ್ದಾರೆ. ಜೊತೆಗೆ ಬೇರೆ ಪಕ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರಿಗೂ ಸಹ ಯಾವುದಾದರೂ ಸ್ಥಾನಮಾನ ನೀಡಬೇಕಿದೆ. ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಅವರ ಅದೃಷ್ಟ ಎಂದು ತಿಳಿಸಿದರು.
ಇನ್ನುಳಿದ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಕ್ಷೇತ್ರದಲ್ಲಿ ರೈತರ ಪ್ರಮುಖ ಸಮಸ್ಯೆಯಾಗಿರುವ ನೀರಾವರಿ ಸಮಸ್ಯೆಯಿಂದ ಅವರನ್ನು ಪಾರು ಮಾಡಬೇಕಿದೆ. ಕೆರೆಗಳು ಮತ್ತು ನಾಲೆಗಳು ಸಾಕಷ್ಟು ಅಧ್ವಾನಗೊಂಡಿತ್ತು. ಅವುಗಳನ್ನು ಅಂದಾಜು 800 ಕೋಟಿ ಗೂ ಹೆಚ್ಚಿನ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಅದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆರುತ್ತಿರುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರೀಕ್ಷೆಗೂ ಮೀರಿ ಅನುದಾನ ಬಿಡುಗಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರತಿದಿನ ಯಾವುದಾದರೂ ಒಂದು ಆರೋಪ ಮಾಡುತ್ತಿದ್ದರು. ಆದರೆ, ಅವರು ರಾಜೀನಾಮೆ ನೀಡಿದ ಮೇಲೆ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ ಅವರಿಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದೆಯಾ ಎಂದು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನು ಶುಕ್ರವಾರ ತಡರಾತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಭೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಉದಯ್ ಅವರು, ಯಾವ ಸಭೆಯೂ ನಡೆದಿಲ್ಲ. ದೆಹಲಿಯಿಂದ ರಾತ್ರಿ ಬರುವುದು ತಡವಾಯಿತು. ಹೀಗಾಗಿ ಅವರಿಗೆ ಶಾಸಕರಲ್ಲ ಶುಭಾಶಯ ಕೋರಿದ್ದೇವೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಜಯರಾಂ, ಪುಟ್ಟರಾಮು, ಶ್ರೀನಿವಾಸ್, ಚಂದ್ರು, ಕರಡಕೆರೆ ಮನು, ಕೆಂಪರಾಜು, ರಾಜಣ್ಣ, ಸಿದ್ದರಾಜು, ಕಾವೇರಿ ನೀರಾವರಿ ನಿಗಮದ ಇಇ ನಾಗರಾಜ್, ಎಇಇ ಪ್ರಶಾಂತ್, ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








