ಭೋಪಾಲ್: ಬೆನ್ನುನೋವು ನಿವಾರಣೆಗೆಂದು ಬಳಸುತ್ತಿದ್ದ ಎಲೆಕ್ಟ್ರಿಕ್ ಥೆರಪಿ ಮ್ಯಾಟ್ (ಚಿಕಿತ್ಸಾ ಹಾಸಿಗೆ) ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ, 90 ವರ್ಷದ ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಮೇ 27 ರಂದು ಈ ದುರ್ಘಟನೆ ಸಂಭವಿಸಿದ್ದು, ಗ್ಲ್ಯಾಡ್ವಿನ್ ಎಂಬ ವೃದ್ಧರೇ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೃತ ಗ್ಲ್ಯಾಡ್ವಿನ್ ಅವರು ದೀರ್ಘಕಾಲದ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರ ಸಲಹೆಯ ಮೇರೆಗೆ ಅವರು ನೋವು ಉಪಶಮನಕ್ಕಾಗಿ ಎಲೆಕ್ಟ್ರಿಕ್ ಥೆರಪಿ ಯಂತ್ರವೊಂದನ್ನು ಖರೀದಿಸಿದ್ದರು. ಪ್ರತಿದಿನದಂತೆ ಅಂದೂ ಕೂಡ ಅವರು ತಮಗಾಗುತ್ತಿದ್ದ ತೀವ್ರ ಬೆನ್ನುನೋವನ್ನು ಕಡಿಮೆ ಮಾಡಿಕೊಳ್ಳಲು ಈ ಮ್ಯಾಟ್ ಮೇಲೆ ಮಲಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಚಿಕಿತ್ಸಾ ಅವಧಿಯಲ್ಲಿ, ಎಲೆಕ್ಟ್ರಿಕ್ ಮ್ಯಾಟ್ನಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡು ಕಿಡಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಆದ ಕೆಲವೇ ಸೆಕೆಂಡುಗಳಲ್ಲಿ ಇಡೀ ಮ್ಯಾಟ್ಗೆ ಬೆಂಕಿ ಆವರಿಸಿದ್ದು, ವೃದ್ಧರ ದೇಹ ಸಂಪೂರ್ಣವಾಗಿ ಬೆಂಕಿಯ ಜ್ವಾಲೆಗೆ ಸಿಲುಕಿದೆ.
ವೃದ್ಧರ ಕಿರುಚಾಟವನ್ನು ಕೇಳಿ ತಕ್ಷಣವೇ ಧಾವಿಸಿ ಬಂದ ಕುಟುಂಬಸ್ಥರು ಬೆಂಕಿಯನ್ನು ನಂದಿಸಿ, ಗಂಭೀರವಾಗಿ ಗಾಯಗೊಂಡಿದ್ದ ಗ್ಲ್ಯಾಡ್ವಿನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದೇಹದ ಬಹುತೇಕ ಭಾಗಗಳು ತೀವ್ರವಾಗಿ ಸುಟ್ಟುಹೋಗಿದ್ದರಿಂದ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ತಾಂತ್ರಿಕ ದೋಷವೇ ಕಾರಣ?
ಪ್ರಾಥಮಿಕ ತನಿಖೆಯ ಪ್ರಕಾರ, ಥೆರಪಿ ಮ್ಯಾಟ್ನ ಬ್ಯಾಟರಿ ಅಥವಾ ಅದರೊಳಗಿನ ವೈರಿಂಗ್ ವ್ಯವಸ್ಥೆಯಲ್ಲಿ ಉಂಟಾದ ಪ್ರಮುಖ ತಾಂತ್ರಿಕ ದೋಷವೇ ಈ ಶಾರ್ಟ್ ಸರ್ಕ್ಯೂಟ್ಗೆ ಕಾರಣ ಎಂದು ಶಂಕಿಸಲಾಗಿದೆ.
ಈ ದುರಂತಕ್ಕೆ ಕಾರಣವಾದ ನಿಖರವಾದ ಉತ್ಪಾದನಾ ದೋಷ ಅಥವಾ ತಾಂತ್ರಿಕ ಲೋಪದೋಷಗಳನ್ನು ಪತ್ತೆಹಚ್ಚಲು ಪೊಲೀಸರು ಸದ್ಯ ವಿವರವಾದ ತನಿಖೆಯನ್ನು ಕೈಗೊಂಡಿದ್ದಾರೆ.








