ನವದೆಹಲಿ: ಭಾರತದ ಗಲ್ಲಿ ಗಲ್ಲಿಗಳ ಬೀದಿಬದಿಯ ಸಂಸ್ಕೃತಿಯ ಭಾಗವಾಗಿರುವ, ಭಾರತೀಯರ ಜೀವನಾಡಿಯಾದ ‘ಮಸಾಲ ಚಾಯ್’ (Masala Chai) ಈಗ ಅಧಿಕೃತವಾಗಿ ಜಗತ್ತಿನ ಅತ್ಯುತ್ತಮ ಚಹಾವಾಗಿ ಹೊರಹೊಮ್ಮಿದೆ. ಜಾಗತಿಕ ಆಹಾರ ಮತ್ತು ಪಾನೀಯಗಳ ಪ್ರತಿಷ್ಠಿತ ಮಾರ್ಗದರ್ಶಿಯಾದ ‘ಟೇಸ್ಟ್‌ಅಟ್ಲಾಸ್’ (TasteAtlas) ಪ್ರಕಟಿಸಿರುವ ಮೇ ಆವೃತ್ತಿಯ “ವಿಶ್ವದ ಟಾಪ್ 100 ಚಹಾಗಳು” ಪಟ್ಟಿಯಲ್ಲಿ ಭಾರತದ ಮಸಾಲ ಚಾಯ್ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.
ಪೂರ್ವ ಏಷ್ಯಾ ಮತ್ತು ಯುರೋಪ್‌ನ ಅತ್ಯಂತ ದುಬಾರಿ ಹಾಗೂ ಪ್ರೀಮಿಯಂ ಚಹಾಗಳನ್ನು ಹಿಂದಿಕ್ಕಿ ಭಾರತದ ಈ ಸಾಂಬಾರ ಪದಾರ್ಥಗಳ ಮಿಶ್ರಣದ ಹಾಲಿನ ಚಹಾ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ ಗಳಿಸಿರುವುದು ಭಾರತೀಯ ಆಹಾರ ಪರಂಪರೆಗೆ ಸಿಕ್ಕ ಐತಿಹಾಸಿಕ ಮನ್ನಣೆಯಾಗಿದೆ.
ಜಾಗತಿಕ ಅಭಿರುಚಿಯಲ್ಲಿ ಬದಲಾವಣೆ
ಶತಮಾನಗಳಿಂದಲೂ ಜಾಗತಿಕ ಪಾನೀಯ ಲೋಕದಲ್ಲಿ ಯಾವುದೇ ಮಿಶ್ರಣವಿಲ್ಲದ ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ವೆರೈಟಿಗಳದ್ದೇ ಮೇಲಗೈ ಇತ್ತು. ಆದರೆ, ಈಗ ಮಸಾಲ ಚಾಯ್ ಮೊದಲ ಸ್ಥಾನಕ್ಕೇರಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನರ ಅಭಿರುಚಿ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸಿಟಿಸಿ (CTC) ಚಹಾ ಎಲೆಗಳು, ಹಾಲು, ಸಕ್ಕರೆ ಹಾಗೂ ಸುಗಂಧಿತ ಸಾಂಬಾರ ಪದಾರ್ಥಗಳ (ಶುಂಠಿ, ಏಲಕ್ಕಿ, ಲವಂಗ ಇತ್ಯಾದಿ) ಅದ್ಭುತ ಮಿಶ್ರಣದಿಂದ ತಯಾರಾಗುವ ಈ ಸಾಮಾನ್ಯ ಜನರ ಚಹಾ, ಇಂದು ಜಪಾನ್‌ನ ಪ್ರಸಿದ್ಧ ಗ್ರೀನ್ ಟೀ ಮತ್ತು ಚೀನಾದ ಸಾಂಪ್ರದಾಯಿಕ ಚಹಾಗಳನ್ನು ಸೋಲಿಸಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅಧಿಪತ್ಯ ಸ್ಥಾಪಿಸಿದೆ.
ಟಾಪ್ 5 ರೇಂಕಿಂಗ್ ಹೀಗಿದೆ:
ವಿಶ್ವದ ಟಾಪ್ ಲೀಡರ್‌ಬೋರ್ಡ್‌ನಲ್ಲಿ ಮಸಾಲ ಚಾಯ್ ತೀವ್ರ ಪೈಪೋಟಿಯ ನಡುವೆಯೂ ಅಗ್ರಸ್ಥಾನ ಕಾಯ್ದುಕೊಂಡಿದೆ.
ಮೊದಲ ಸ್ಥಾನ: ಮಸಾಲ ಚಾಯ್ (ಭಾರತ)
ದ್ವಿತೀಯ ಸ್ಥಾನ: ಹೋಜಿಚಾ (Hojicha – ಜಪಾನ್‌ನ ಹುರಿದ ಗ್ರೀನ್ ಟೀ)
ತೃತೀಯ ಸ್ಥಾನ: ಸಿಲೋನ್ ಬ್ಲ್ಯಾಕ್ ಟೀ (ಶ್ರೀಲಂಕಾ)
ನಾಲ್ಕನೇ ಸ್ಥಾನ: ಸೆಂಚಾ ಗ್ರೀನ್ ಟೀ (Sencha – ಜಪಾನ್)
ಐದನೇ ಸ್ಥಾನ: ಪು-ಎರ್ ಚಹಾ (Pu-erh – ಚೀನಾ)
ಪಟ್ಟಿಯಲ್ಲಿ ಭಾರತೀಯ ಚಹಾಗಳದ್ದೇ ಹವಾ!
ಕೇವಲ ಮಸಾಲ ಚಾಯ್ ಮಾತ್ರವಲ್ಲದೆ, ಒಟ್ಟಾರೆ ಪಟ್ಟಿಯಲ್ಲಿ ಭಾರತದ ವಿವಿಧ ಪ್ರಾದೇಶಿಕ ಚಹಾಗಳು ಭರ್ಜರಿ ಪ್ರದರ್ಶನ ನೀಡಿವೆ.
ಪಶ್ಚಿಮ ಬಂಗಾಳದ ಸುವಾಸಿತ ಡಾರ್ಜಿಲಿಂಗ್ ಚಹಾ ಜಾಗತಿಕವಾಗಿ 6ನೇ ಸ್ಥಾನ ಪಡೆದಿದೆ.
ಅಸ್ಸಾಂನ ಕಡಕ್ ಅಸ್ಸಾಂ ಚಾಯ್ 13ನೇ ಸ್ಥಾನದಲ್ಲಿದೆ.
ಕೇರಳದ ನಿಂಬೆರಸ ಮಿಶ್ರಿತ ಸುಲೈಮಾನಿ ಚಾಯ್, ಹಿಮಾಚಲ ಪ್ರದೇಶದ ಕಾಂಗ್ರಾ ಟೀ ಮತ್ತು ಜಮ್ಮು-ಕಾಶ್ಮೀರದ ಗುಲಾಬಿ ಬಣ್ಣದ ನೂನ್ ಚಾಯ್ ಕೂಡ ಟಾಪ್ 50ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಭಾರತದ ಚಹಾ ವೈವಿಧ್ಯತೆಯನ್ನು ಜಗತ್ತಿಗೆ ಸಾರಿವೆ.
ಪಾರದರ್ಶಕ ಆಯ್ಕೆ ಪ್ರಕ್ರಿಯೆ:
ಈ ರೇಂಕಿಂಗ್ ಯಾವುದೇ ಸಾಮಾನ್ಯ ಸಾರ್ವಜನಿಕ ವೋಟಿಂಗ್ ಅಥವಾ ರೋಬೋಟ್‌ಗಳ (Bots) ಮೂಲಕ ನಡೆದದ್ದಲ್ಲ. ಬದಲಿಗೆ, ಟೇಸ್ಟ್‌ಅಟ್ಲಾಸ್‌ನ ಅತ್ಯಾಧುನಿಕ ಅಲ್ಗಾರಿದಮ್ ವ್ಯವಸ್ಥೆಯು ಕೃತಕ ವೋಟ್‌ಗಳನ್ನು ಫಿಲ್ಟರ್ ಮಾಡಿ, ವಿಶ್ವದಾದ್ಯಂತ ಪ್ರವಾಸ ಮಾಡುವ ನೈಜ ಆಹಾರ ಪ್ರಿಯರು ಮತ್ತು ತಜ್ಞರು ನೀಡಿದ ವಿಮರ್ಶೆಗಳನ್ನು ಆಧರಿಸಿ ಈ ನಿಖರ ಫಲಿತಾಂಶವನ್ನು ಪ್ರಕಟಿಸಿದೆ.
ಪರಂಪರೆಗೆ ಸಿಕ್ಕ ಗೌರವ
ಚಹಾದ ಜೊತೆಗೆ ಭಾರತದ ಐತಿಹಾಸಿಕ ಚಹಾ ತೋಟಗಳಿಗೂ ವಿಶೇಷ ಮಾನ್ಯತೆ ಸಿಕ್ಕಿದೆ. ವಿಶ್ವದ ಅತ್ಯಂತ ಹಳೆಯ ಕಾರ್ಯನಿರ್ವಹಣಾ ಚಹಾ ಕಾರ್ಖಾನೆಗಳಲ್ಲಿ ಒಂದಾದ ಪಶ್ಚಿಮ ಬಂಗಾಳದ ‘ಮಕೈಬಾರಿ ಟೀ ಎಸ್ಟೇಟ್’ ಮತ್ತು ಅಸ್ಸಾಂನ ಅತ್ಯುತ್ತಮ ತಳಿಯ ಚಹಾ ಉತ್ಪಾದಿಸುವ ‘ಹಲ್ಮಾರಿ ಟೀ ಎಸ್ಟೇಟ್’ ಜಾಗತಿಕ ಮಟ್ಟದಲ್ಲಿ ಹೆರಿಟೇಜ್ ಮಾನ್ಯತೆ ಪಡೆದಿವೆ.
ಒಟ್ಟಿನಲ್ಲಿ, ಭಾರತದ ಬೀದಿ ಬದಿಯ ಟೀ ಅಂಗಡಿಗಳಲ್ಲಿ ದಿನ ಬೆಳಗಾದರೆ ಸಿಗುತ್ತಿದ್ದ ‘ಕಟಿಂಗ್ ಚಾಯ್’ ಇಂದು ಜಾಗತಿಕ ಪಾನೀಯ ಲೋಕದ ಮುಖುಟದ ಮಣಿಯಾಗಿದೆ.








