ಲೇಹ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ರಾಜಧಾನಿ ಲೇಹ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮುಂಜಾನೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 4.1 ರಷ್ಟು ದಾಖಲಾಗಿದ್ದು, ಜನರು ಆತಂಕದಿಂದ ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ.
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ (NCS) ಮಾಹಿತಿಯ ಪ್ರಕಾರ, ಭೂಕಂಪವು ಲೇಹ್ ನಗರದಿಂದ ಉತ್ತರ-ಈಶಾನ್ಯಕ್ಕೆ ಸುಮಾರು 164 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ.
ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನದ ಕೇಂದ್ರಬಿಂದು ಇತ್ತು ಎಂದು ಗುರುತಿಸಲಾಗಿದೆ.ಲೇಹ್ ಮಾತ್ರವಲ್ಲದೆ ಲಡಾಖ್‌ನ ಕಾರಗಿಲ್ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ. ಕೆಲವು ಸೆಕೆಂಡುಗಳ ಕಾಲ ಭೂಮಿ ನಡುಗಿದ ಅನುಭವವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.








