ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಓಮನ್ ಕರಾವಳಿಯ ಬಳಿ 12 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ ಟೋಗೋ ಧ್ವಜದ (Togo-flagged) ರಾಸಾಯನಿಕ ಟ್ಯಾಂಕರ್ ಮೇಲೆ ಇರಾನ್ ಕರಾವಳಿ ರಕ್ಷಣಾ ಪಡೆ ಗುಂಡಿನ ದಾಳಿ ನಡೆಸಿದೆ. ಏಪ್ರಿಲ್ 25 ರಂದು ನಡೆದ ಈ ಘಟನೆಯನ್ನು ಭಾರತದ ಹಡಗು ಸಚಿವಾಲಯವು ಇಂದು (ಏಪ್ರಿಲ್ 27, 2026) ಖಚಿತಪಡಿಸಿದೆ.
’ಎಂ.ಟಿ. ಚಿರೋನ್’ (MT Chiron) ಹೆಸರಿನ ಈ ರಾಸಾಯನಿಕ ಟ್ಯಾಂಕರ್ ಓಮನ್ನ ಶಿನಾಸ್ ಪೋರ್ಟ್ (Shinas Port) ಮಿತಿಯ ಬಳಿ ಇತರ ಹಡಗುಗಳೊಂದಿಗೆ ಸಾಗುತ್ತಿತ್ತು. ಈ ವೇಳೆ ಇರಾನ್ನ ಕರಾವಳಿ ರಕ್ಷಣಾ ಪಡೆಗಳು ಹಡಗನ್ನು ತಡೆಹಿಡಿಯಲು ಯತ್ನಿಸಿವೆ.
ಇರಾನ್ ಪಡೆಗಳು ಹಡಗನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿ ಗುಂಡು ಹಾರಿಸಿವೆ. ಇದರಿಂದಾಗಿ ಸಮುದ್ರದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಡಗಿನಲ್ಲಿದ್ದ ಎಲ್ಲಾ 12 ಮಂದಿ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಹಡಗು ಸಚಿವಾಲಯದ ನಿರ್ದೇಶಕ ಮಂದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ.








