ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳಾ ನೌಕರರಿಗೆ ಸರ್ಕಾರವು ಯುಗಾದಿಯ ಸಿಹಿ ಸುದ್ದಿ ನೀಡಿದೆ. ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಪ್ರತಿ ತಿಂಗಳು ‘ಋತುಚಕ್ರ ರಜೆ’ (Menstrual Leave) ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಅಜಯ್ ಎಸ್. ಕೊರಡೆ ಅವರು ಈ ಆದೇಶವನ್ನು ಹೊರಡಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಆದೇಶದ ಪ್ರಮುಖ ಮುಖ್ಯಾಂಶಗಳು:
-
ಯಾರಿಗೆ ಅನ್ವಯ?: ರಾಜ್ಯ ಸರ್ಕಾರದ ಇಲಾಖೆಗಳು, ನಿಗಮಗಳು, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ (On Contract) ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಈ ಸೌಲಭ್ಯ ಸಿಗಲಿದೆ.
-
ರಜೆಯ ಅವಧಿ: ಪ್ರತಿ ತಿಂಗಳು ಗರಿಷ್ಠ ಒಂದು ದಿನದಂತೆ, ವರ್ಷಕ್ಕೆ ಒಟ್ಟು 12 ದಿನಗಳ ವೇತನಸಹಿತ ಋತುಚಕ್ರ ರಜೆಯನ್ನು ಪಡೆಯಬಹುದು.
-
ವಯೋಮಿತಿ: 18 ರಿಂದ 52 ವರ್ಷದೊಳಗಿನ ಮಹಿಳಾ ನೌಕರರು ಈ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
-
ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ: ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಪ್ರಾಧಿಕಾರವೇ ಈ ರಜೆಯನ್ನೂ ಮಂಜೂರು ಮಾಡಬಹುದು.
-
ಪ್ರತ್ಯೇಕ ದಾಖಲೆ: ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಈ ರಜೆಯನ್ನು ಪ್ರತ್ಯೇಕವಾಗಿ ನಮೂದಿಸಬೇಕು ಮತ್ತು ಇದನ್ನು ಇತರ ಯಾವುದೇ ರಜೆಗಳೊಂದಿಗೆ ಸಂಯೋಜಿಸುವಂತಿಲ್ಲ.
ಸಾಮಾಜಿಕ ಕಳಕಳಿಯ ಹೆಜ್ಜೆ:
ಖಾಸಗಿ ವಲಯದ ಕೆಲವು ಕಂಪನಿಗಳಲ್ಲಿ ಈಗಾಗಲೇ ಈ ಸೌಲಭ್ಯ ಜಾರಿಯಲ್ಲಿದ್ದರೂ, ಸರ್ಕಾರಿ ವಲಯದಲ್ಲಿ ಗುತ್ತಿಗೆ ನೌಕರರನ್ನು ಪರಿಗಣಿಸಿ ಇಂತಹ ನಿರ್ಧಾರ ಕೈಗೊಂಡಿರುವುದು ಅತ್ಯಂತ ಪ್ರಶಂಸನೀಯ. ಮಹಿಳಾ ನೌಕರರ ದೈಹಿಕ ಸಮಸ್ಯೆಗಳನ್ನು ಗೌರವಿಸಿ, ಅವರಿಗೆ ಕೆಲಸದ ಅವಧಿಯಲ್ಲಿ ನೆಮ್ಮದಿ ನೀಡುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಕ್ರಮವಾಗಿದೆ.

BIG BREAKING: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ
ಬಾಂಗ್ಲಾದೇಶಕ್ಕೆ ಭಾರತದ ಮುಂದಿನ ಹೈಕಮಿಷನರ್ ಆಗಿ ಮಾಜಿ ಕೇಂದ್ರ ಸಚಿವ ದಿನೇಶ್ ತ್ರಿವೇದಿ ನೇಮಕ








