ಧಾರವಾಡ: ರುದ್ರಭೂಮಿಗಾಗಿ ಜಮೀನು ಸ್ವಾಧೀನಪಡಿಸಿಕೊಂಡು, ಬಾಕಿ ಪರಿಹಾರ ಹಣ ನೀಡಲು ಸತಾಯಿಸುತ್ತಿದ್ದ ಜಿಲ್ಲಾಡಳಿತಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಕೋರ್ಟ್ ಆದೇಶದಂತೆ ಇಂದು (ಏಪ್ರಿಲ್ 27) ಧಾರವಾಡದ ಉಪವಿಭಾಗಾಧಿಕಾರಿಗಳ (AC) ಕಚೇರಿಯ ಪೀಠೋಪಕರಣ ಹಾಗೂ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ: ನವಲಗುಂದ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ರೈತ ನಾಗನಗೌಡ ಪಾಟೀಲ ಎಂಬುವವರಿಗೆ ಸೇರಿದ 2 ಎಕರೆ ಜಮೀನನ್ನು 2010ರಲ್ಲಿ ರುದ್ರಭೂಮಿಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆಗ ಪ್ರತಿ ಗುಂಟೆಗೆ 10,500 ರೂ. ದರದಂತೆ ಒಟ್ಟು 35 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿತ್ತು. ಆದರೆ, ರೈತನಿಗೆ ಕೇವಲ 20 ಲಕ್ಷ ರೂ. ನೀಡಿ, ಉಳಿದ 15 ಲಕ್ಷ ರೂ. ಹಣವನ್ನು ಕಳೆದ 16 ವರ್ಷಗಳಿಂದ ಬಾಕಿ ಉಳಿಸಿಕೊಳ್ಳಲಾಗಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ – ರೈತನ ಕಾನೂನು ಹೋರಾಟ: ಬಾಕಿ ಹಣಕ್ಕಾಗಿ ರೈತ ನಾಗನಗೌಡ ಅವರು ಹತ್ತಾರು ಬಾರಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಅಲೆದಾಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಮೌನಕ್ಕೆ ಶರಣಾಗಿದ್ದ ಅಧಿಕಾರಿಗಳ ನಡೆಯಿಂದ ಬೇಸತ್ತ ರೈತ ಅಂತಿಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಧಾರವಾಡದ 2ನೇ ಅಧಿಕ ದಿವಾಣಿ ನ್ಯಾಯಾಲಯವು, ರೈತನಿಗೆ ಬರಬೇಕಾದ ಬಾಕಿ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಕಚೇರಿ ಜಪ್ತಿಗೆ ಆದೇಶಿಸಿತ್ತು.
ಕಚೇರಿ ಸಾಮಗ್ರಿ ಜಪ್ತಿ: ನ್ಯಾಯಾಲಯದ ಆದೇಶದಂತೆ ಇಂದು ಕಚೇರಿಗೆ ಭೇಟಿ ನೀಡಿದ ಕೋರ್ಟ್ ಸಿಬ್ಬಂದಿ, ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿದ್ದ ಮೇಜು, ಕುರ್ಚಿ, ಕಂಪ್ಯೂಟರ್ ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಜಮೀನು ಕಳೆದುಕೊಂಡು ದಶಕಗಳ ಕಾಲ ನ್ಯಾಯಕ್ಕಾಗಿ ಕಾಯುತ್ತಿದ್ದ ರೈತನಿಗೆ ಕೊನೆಗೂ ಕಾನೂನಿನ ಮೂಲಕ ನ್ಯಾಯ ಸಿಕ್ಕಂತಾಗಿದೆ. ಈ ಘಟನೆಯು ಕರ್ತವ್ಯ ಲೋಪ ಎಸಗುವ ಮತ್ತು ರೈತರನ್ನು ಸತಾಯಿಸುವ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
‘ಫಸ್ಟ್ ಬಾರ್ನ್ ಮಕ್ಕಳು’ ಯಾಕೆ ಹೆಚ್ಚು ಸಂಪಾದಿಸುತ್ತಾರೆ? ಇಲ್ಲಿದೆ ವೈಜ್ಞಾನಿಕ ರಹಸ್ಯ | Firstborns








