ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಹಠಾತ್ ಆಗಿ ಮಳೆ ಆರಂಭವಾಗಿದ್ದು, ಸುಡುಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ಕೊಂಚ ನಿರಾಳತೆ ತಂದಿದೆ. ಮಧ್ಯಾಹ್ನದ ಬಳಿಕ ದಿಢೀರನೆ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದ್ದು, ನಗರದ ಪ್ರಮುಖ ಬಡಾವಣೆಗಳಲ್ಲಿ ಜಿಟಿಜಿಟಿ ಮಳೆಯೊಂದಿಗೆ ಜಲಾವೃತಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ವಿಶೇಷವಾಗಿ ಉತ್ತರ ಬೆಂಗಳೂರಿನ ಭಾಗಗಳಾದ ಹೆಬ್ಬಾಳ, ಯಲಹಂಕ, ಅಮೃತಹಳ್ಳಿ ಹಾಗೂ ಬ್ಯಾಟರಾಯನಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣದಿಂದ ಹಿಡಿದು ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ. ಕಪ್ಪಿಟ್ಟ ಮೋಡಗಳೊಂದಿಗೆ ಗಾಳಿ ಬೀಸುತ್ತಿದ್ದು, ಹಗಲಿನಲ್ಲೇ ಕತ್ತಲೆಯ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿನ ಪ್ರಮುಖ ಐಟಿ ಹಬ್‌ಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ ವ್ಯಾಪ್ತಿಯಲ್ಲೂ ಭಾರಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಕಚೇರಿ ಕೆಲಸ ಮುಗಿಸಿ ಹೊರಬರುವ ಉದ್ಯೋಗಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಟೆಕ್ ಪಾರ್ಕ್ ರಸ್ತೆಗಳಲ್ಲಿ ನೀರು ನಿಲ್ಲಲು ಆರಂಭವಾಗಿದ್ದು, ವಾಹನಗಳ ಸಂಚಾರ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ.
ಇನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಳೆಗೆ ಸಂಪೂರ್ಣವಾಗಿ ಸಿಲುಕಿಕೊಂಡಿದ್ದಾರೆ. ದಿಢೀರ್ ಮಳೆಯಿಂದ ರಕ್ಷಣೆ ಪಡೆಯಲು ಸವಾರರು ಹೆಬ್ಬಾಳ ಮತ್ತು ಯಲಹಂಕ ಭಾಗದ ಫ್ಲೈಓವರ್‌ಗಳ ಕೆಳಗೆ ಹಾಗೂ ಹತ್ತಿರದ ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದರಿಂದಾಗಿ ಫ್ಲೈಓವರ್ ಅಡಿಯ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ.








