ಪ್ರಯಾಗ್ರಾಜ್: ಮೊದಲ ಹೆರಿಗೆ ರಜೆ ಪಡೆದ ಎರಡು ವರ್ಷಗಳ ಒಳಗಾಗಿ ಎರಡನೇ ಮಗುವಿಗೆ ರಜೆ ಕೋರಿದರೆ, ಅದನ್ನು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ‘ಹೆರಿಗೆ ಸೌಲಭ್ಯ ಕಾಯ್ದೆ’ಯು ಮಹಿಳೆಯರ ಪ್ರಸೂತಿ ಹಕ್ಕನ್ನು ರಕ್ಷಿಸುತ್ತದೆಯೇ ಹೊರತು, ಎರಡು ರಜೆಗಳ ನಡುವಿನ ಅವಧಿಯನ್ನು ನಿರ್ಬಂಧಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಉತ್ತರ ಪ್ರದೇಶದ ಹಣಕಾಸು ನಿಯಮಾವಳಿಗಳ ಅಡಿಯಲ್ಲಿ ಎರಡು ಹೆರಿಗೆ ರಜೆಗಳ ನಡುವೆ ಎರಡು ವರ್ಷಗಳ ಅಂತರವಿರಬೇಕು ಎಂಬ ನಿಯಮವನ್ನು ಉಲ್ಲೇಖಿಸಿ ರಜೆ ನಿರಾಕರಿಸುವುದನ್ನು ಕೋರ್ಟ್ ತಳ್ಳಿಹಾಕಿದೆ. ಕೇಂದ್ರದ ‘ಹೆರಿಗೆ ಸೌಲಭ್ಯ ಕಾಯ್ದೆ-1961’ ಕ್ಕಿಂತ ರಾಜ್ಯದ ನಿಯಮಗಳು ಮಿಗಿಲಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಮಾನವೀಯ ಹಕ್ಕು: ಹೆರಿಗೆ ರಜೆ ಎಂಬುದು ಕೇವಲ ಶಾಸನಬದ್ಧ ಹಕ್ಕಲ್ಲ, ಅದು ಮಹಿಳೆಯ ಘನತೆ ಮತ್ತು ಮಗುವಿನ ಆರೈಕೆಗೆ ಸಂಬಂಧಿಸಿದ ಮಾನವೀಯ ಹಕ್ಕಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ದೊಡ್ಡ ಸಮಾಧಾನ ತಂದಿದೆ.








