ಬೆಂಗಳೂರು : ಲಂಚ ಸ್ವೀಕರಿಸುತ್ತಿದ್ದ ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕಿಯನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಫೋನ್ ಪರಿಕರಗಳ ಪ್ಯಾಕಿಂಗ್‌ಗೆ ಪರವಾನಗಿ ಅನುಮೋದಿಸಲು ಪ್ರತಿಯಾಗಿ 5 ಸಾವಿರ ರೂ ಸ್ವೀಕರಿಸುತ್ತಿದ್ದಾಗ ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕಿಯನ್ನ ವಾಣಿಶ್ರೀ ಎಂ.ಎಸ್ ಅವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ಎಸ್.ಪಾಳ್ಯದ ನಿವಾಸಿಯಾದ ಕಿರಣ್ ಆರ್.ಎಂ ಅವರು ಮೊಬೈಲ್ ಫೋನ್ ಪರಿಕರಗಳ ಪ್ಯಾಕಿಂಗ್‌ಗೆ ಪರವಾನಗಿ ಕೋರಿ ಕಾನೂನು ಮಾಪನಶಾಸ್ತ್ರ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪರವಾನಗಿ ಅನುಮೋದನೆಗೆ ಸಹಾಯಕ ನಿಯಂತ್ರಕಿ ವಾಣಿಶ್ರೀ ಅವರು 10 ಸಾವಿರ ರೂ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿ ಕಿರಣ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಎಸ್.ಪಿ ಶಿವಪ್ರಕಾಶ್ ದೇವರಾಜು ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ 5 ಸಾವಿರ ರೂ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ವಾಣಿಶ್ರೀ ಅವರನ್ನ ವಶಕ್ಕೆ ಪಡೆದಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.








