ನವದೆಹಲಿ: ಸೂರ್ಯನ ಮೇಲ್ಮೈನಲ್ಲಿ ಸಂಭವಿಸಿದ ಬೃಹತ್ ಸ್ಫೋಟದ ಪರಿಣಾಮ, ಶಕ್ತಿಶಾಲಿ ಸೌರ ಚಂಡಮಾರುತವೊಂದು ಇಂದು (ಜೂನ್ 8) ಭೂಮಿಗೆ ಅಪ್ಪಳಿಸಲಿದೆ. ಈ ವಿದ್ಯಮಾನದಿಂದಾಗಿ ಉತ್ತರ ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳ ಆಕಾಶದಲ್ಲಿ ಅಪರೂಪದ ‘ಅರೋರಾ’ (Northern Lights) ಬೆಳಕಿನ ಆಟ ಕಂಡುಬರುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಮತ್ತು ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (NOAA) ಎಚ್ಚರಿಕೆ ನೀಡಿವೆ.
ಜೂನ್ 6ರಂದು ಸೂರ್ಯನ ‘ಆಕ್ಟಿವ್ ರೀಜನ್ 4461’ (AR4461) ಎಂಬ ಪ್ರದೇಶದಲ್ಲಿ ‘M1.8’ ಶ್ರೇಣಿಯ ಸೌರ ಜ್ವಾಲೆ (Solar Flare) ಉಂಟಾಗಿತ್ತು. ಇದರ ಜೊತೆಗೆ ಸೂರ್ಯನಿಂದ ಅಯಾನೀಕೃತ ಅನಿಲ ಮತ್ತು ಕಾಂತೀಯ ಕ್ಷೇತ್ರಗಳ ಬೃಹತ್ ಗುಚ್ಛ (Coronal Mass Ejection – CME) ಸೆಕೆಂಡಿಗೆ ಸುಮಾರು 1,400 ಕಿ.ಮೀ ವೇಗದಲ್ಲಿ ನೇರವಾಗಿ ಭೂಮಿಯತ್ತ ಧಾವಿಸುತ್ತಿದೆ.
ಈ ಚಂಡಮಾರುತವನ್ನು ‘ಜಿ3’ (ಬಲವಾದ) ಭೂ-ಕಾಂತೀಯ ಚಂಡಮಾರುತ ಎಂದು ವರ್ಗೀಕರಿಸಲಾಗಿದೆ. ಇದು ಕೆಲವೊಮ್ಮೆ ‘ಜಿ4’ (ತೀವ್ರ) ಮಟ್ಟಕ್ಕೂ ಏರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸಾಮಾನ್ಯವಾಗಿ ಧ್ರುವ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಹಸಿರು, ನೇರಳೆ ಮತ್ತು ಕೆಂಪು ಬಣ್ಣದ ಈ ಬೆಳಕಿನ ಚಿತ್ತಾರ, ಈ ಚಂಡಮಾರುತದ ಪ್ರಭಾವದಿಂದಾಗಿ ಕೆಳ ಅಕ್ಷಾಂಶಗಳಿಗೂ ವಿಸ್ತರಿಸಬಹುದು. ಲಡಾಖ್ನ ಹನ್ಲೆ ಡಾರ್ಕ್ ಸ್ಕೈ ರಿಸರ್ವ್ನಂತಹ ಎತ್ತರದ ಮತ್ತು ಕತ್ತಲೆಯ ಪ್ರದೇಶಗಳಲ್ಲಿ ಇದನ್ನು ಕಾಣುವ ಸಾಧ್ಯತೆ ಹೆಚ್ಚಿದೆ.
ಈ ಚಂಡಮಾರುತದಿಂದಾಗಿ ಜಿಪಿಎಸ್ (GPS) ಸಂಕೇತಗಳು, ರೇಡಿಯೋ ಸಂವಹನ ಮತ್ತು ವಿದ್ಯುತ್ ಗ್ರಿಡ್ಗಳ ಮೇಲೆ ಸಣ್ಣ ಮಟ್ಟದ ವ್ಯತ್ಯಯ ಉಂಟಾಗಬಹುದು.
ಈ ಸೌರ ಚಂಡಮಾರುತದ ಗರಿಷ್ಠ ಪ್ರಭಾವವು ಭಾರತೀಯ ಕಾಲಮಾನದ ಪ್ರಕಾರ ಇಂದು (ಜೂನ್ 8) ರಾತ್ರಿ 11:30ರಿಂದ ನಾಳೆ (ಜೂನ್ 9) ಮುಂಜಾನೆ 2:30ರ ಅವಧಿಯಲ್ಲಿ ಕಂಡುಬರುವ ಸಾಧ್ಯತೆಯಿದೆ.
2024ರ ಮೇ ತಿಂಗಳಲ್ಲಿ ಸಂಭವಿಸಿದ ಭೀಕರ ಸೌರ ಚಂಡಮಾರುತದ ಸಂದರ್ಭದಲ್ಲಿ ಲಡಾಖ್ನ ಆಕಾಶದಲ್ಲಿ ಕೆಂಪು ಬಣ್ಣದ ಅರೋರಾ ಬೆಳಕು ಕಾಣಿಸಿಕೊಂಡಿತ್ತು. ಇದೀಗ ಸಂಭವಿಸುತ್ತಿರುವ ಚಂಡಮಾರುತವು ಅಷ್ಟೊಂದು ಪ್ರಬಲವಾಗಿಲ್ಲದಿದ್ದರೂ, ವಿಜ್ಞಾನಿಗಳು ಮತ್ತು ಖಗೋಳಾಸಕ್ತರು ಈ ವಿದ್ಯಮಾನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಆಕಾಶದಲ್ಲಿನ ಈ ಅಪರೂಪದ ಬೆಳಕಿನ ವೈಭವವನ್ನು ನೋಡಲು ಬಯಸುವವರು ಕತ್ತಲ ಪ್ರದೇಶಗಳನ್ನು ಆರಿಸಿಕೊಳ್ಳುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.








