ಕಠ್ಮಂಡು: ನೇಪಾಳದ ಪ್ರಧಾನಿ ಬಲೆನ್ ಶಾ ನೇತೃತ್ವದ ಹೊಸ ಸರ್ಕಾರವು ಭಾರತದ ಗಡಿ ಭಾಗದ ಮಾರುಕಟ್ಟೆಗಳಿಂದ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಭಾರತದಿಂದ ನೇಪಾಳಕ್ಕೆ ಕೊಂಡೊಯ್ಯುವ ಕೇವಲ 100 ನೇಪಾಳಿ ರೂಪಾಯಿ (ಅಂದಾಜು 63 ಭಾರತೀಯ ರೂಪಾಯಿ) ಮೌಲ್ಯದ ಸರಕುಗಳ ಮೇಲೂ ಕಡ್ಡಾಯವಾಗಿ ಕಸ್ಟಮ್ಸ್ ಸುಂಕ (ಭನ್ಸಾರ್) ಪಾವತಿಸಬೇಕೆಂದು ಆದೇಶಿಸಿದೆ.
ಈ ಮೊದಲು ಗಡಿ ಭಾಗದ ನಿವಾಸಿಗಳು ದೈನಂದಿನ ಬಳಕೆಯ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಸುಂಕವಿಲ್ಲದೆ ಕೊಂಡೊಯ್ಯಲು ಅವಕಾಶವಿತ್ತು. ಈಗ ₹100 ಮೌಲ್ಯ ದಾಟಿದ ತಕ್ಷಣ ಶೇ. 5 ರಿಂದ ಶೇ. 80 ರವರೆಗೆ ತೆರಿಗೆ ವಿಧಿಸಲಾಗುತ್ತಿದೆ.
ಗಡಿ ಭಾಗಗಳಲ್ಲಿ ನೇಪಾಳದ ಸಶಸ್ತ್ರ ಪೊಲೀಸ್ ಪಡೆ (APF) ನಿಯೋಜಿಸಲಾಗಿದ್ದು, ಲೌಡ್‌ಸ್ಪೀಕರ್ ಮೂಲಕ ಪ್ರತಿಯೊಬ್ಬರೂ ಸುಂಕ ಪಾವತಿಸುವಂತೆ ಸೂಚನೆ ನೀಡಲಾಗುತ್ತಿದೆ.ಸರ್ಕಾರಿ ನೌಕರರು, ಎನ್‌ಜಿಒ ಕಾರ್ಯಕರ್ತರು ಅಥವಾ ಸಾಮಾನ್ಯ ನಾಗರಿಕರು – ಯಾರಿಗೂ ಈ ಸುಂಕದಿಂದ ವಿನಾಯಿತಿ ನೀಡಿಲ್ಲ.
ಈ ನಿರ್ಧಾರವು ಗಡಿ ಭಾಗದ ಸಾವಿರಾರು ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿರುವ ನೇಪಾಳಿ ಜನರು ನಿತ್ಯದ ಅಗತ್ಯ ವಸ್ತುಗಳಾದ ಬೇಳೆ, ಸಕ್ಕರೆ, ಬಟ್ಟೆ ಮತ್ತು ಔಷಧಿಗಳಿಗಾಗಿ ಭಾರತೀಯ ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ.
”ಕೇವಲ ಒಂದು ಕೆಜಿ ಚಹಾ ಪುಡಿ ಅಥವಾ ಕೆಲವು ಬಿಸ್ಕೆಟ್ ಪ್ಯಾಕೆಟ್ ಖರೀದಿಸಿದರೂ ₹100 ಮಿತಿ ದಾಟುತ್ತದೆ. ಇದರಿಂದಾಗಿ ಸಣ್ಣ ಖರೀದಿದಾರರು ಗಂಟೆಗಟ್ಟಲೆ ಕ್ಯೂ ನಿಂತು ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೇಪಾಳ ಸರ್ಕಾರದ ಈ ಏಕಪಕ್ಷೀಯ ನಿರ್ಧಾರದಿಂದ ಗಡಿ ಭಾಗದ ಭಾರತೀಯ ವ್ಯಾಪಾರಿಗಳ ವಹಿವಾಟು ಕುಸಿದಿದೆ. ಈ ನಿಯಮವು 1950ರ ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದದ ಆಶಯಕ್ಕೆ ವಿರುದ್ಧವಾಗಿದೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.








