ಮಂಡ್ಯ : ಜಿಲ್ಲೆಯಲ್ಲಿ ಅತ್ಯಂತ ದುರದೃಷ್ಟಕರ ಹಾಗೂ ಕರುಳು ಹಿಂಡುವ ಘಟನೆಯೊಂದು ಸಂಭವಿಸಿದೆ. ಆಟವಾಡುತ್ತಿದ್ದ ಎರಡು ವರ್ಷದ ಕಂದಮ್ಮನೊಂದು ಆಕಸ್ಮಿಕವಾಗಿ ನೀರಿನ ಸಂಪ್‌ಗೆ ಬಿದ್ದು ಸಾವನ್ನಪ್ಪಿರುವ ಧೋರಣ ಘಟನೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ದುರ್ದೈವಿ ಬಾಲಕನನ್ನು ಲಕ್ಷ್ಮೀಸಾಗರ ಗ್ರಾಮದ ನಿವಾಸಿಗಳಾದ ಹರೀಶ್ ಮತ್ತು ಸುಷ್ಮಾ ದಂಪತಿಯ ಪುತ್ರ ವಿನು (2 ವರ್ಷ) ಎಂದು ಗುರುತಿಸಲಾಗಿದೆ. ಕಣ್ಣೆದುರೇ ಇದ್ದ ಮಗು ಇನ್ನು ನೆನಪಾಗಿ ಉಳಿದಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ಶನಿವಾರ ಬಾಲಕ ವಿನು ಎಂದಿನಂತೆ ತನ್ನ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಮನೆಯ ಮುಂದಿದ್ದ ನೀರಿನ ಸಂಪ್‌ನ ಮುಚ್ಚಳ ಸರಿಯಾಗಿ ಮುಚ್ಚದ ಕಾರಣ ಅಥವಾ ಆಕಸ್ಮಿಕವಾಗಿ ಮಗು ಅದರ ಬಳಿ ಹೋದಾಗ ಕಾಲು ಜಾರಿ ಒಳಗೆ ಬಿದ್ದಿದೆ ಎನ್ನಲಾಗಿದೆ. ಮಗು ಕಾಣಿಸುತ್ತಿಲ್ಲ ಎಂದು ಪೋಷಕರು ಹುಡುಕಾಡಿದಾಗ ಈ ಘೋರ ದುರಂತ ಬೆಳಕಿಗೆ ಬಂದಿದೆ.
ಮಗುವನ್ನು ಸಂಪ್‌ನಿಂದ ಮೇಲಕ್ಕೆತ್ತಿ ರಕ್ಷಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲೇ ಮಗು ಜೀವ ಬಿಟ್ಟಿತ್ತು. ಕಣ್ಣಿನ ಮಣಿಯಂತಿದ್ದ ಮಗುವನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಹೆತ್ತವರ ಕಟು ರೋದನವನ್ನು ನೋಡಲಾಗದೆ ನೆರೆಹೊರೆಯವರು ಕಣ್ಣೀರು ಹಾಕುತ್ತಿದ್ದಾರೆ. ಲಕ್ಷ್ಮೀಸಾಗರ ಗ್ರಾಮದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ.
ಮನವಿ: ಈ ಘಟನೆಯು ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಸಣ್ಣ ಮಕ್ಕಳಿರುವ ಪೋಷಕರಲ್ಲಿ ಎಚ್ಚರಿಕೆಯ ಗಂಟೆಯಾಗಿದೆ. ಮನೆಯ ಸುತ್ತಮುತ್ತ ಇರುವ ನೀರಿನ ಸಂಪ್ ಹಾಗೂ ತೆರೆದ ಬಾವಿಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು ಮತ್ತು ಅವುಗಳ ಮುಚ್ಚಳಗಳನ್ನು ಸುರಕ್ಷಿತವಾಗಿ ಮುಚ್ಚಿಡುವುದನ್ನು ಕಡ್ಡಾಯಗೊಳಿಸಬೇಕಿದೆ.








