ತೆಹ್ರಾನ್: ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದೆ. ಕದನ ವಿರಾಮದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಶನಿವಾರ ಸಂಜೆಯಿಂದ ಈ ಆಯಕಟ್ಟಿನ ಸಮುದ್ರ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ.
“ಕದನ ವಿರಾಮದ ಷರತ್ತುಗಳ ಪ್ರಕಾರ ಅಮೆರಿಕವು ನಮ್ಮ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ತೆರವುಗೊಳಿಸಬೇಕಿತ್ತು. ಆದರೆ ಅಮೆರಿಕ ಈ ಭರವಸೆಯನ್ನು ಈಡೇರಿಸಿಲ್ಲ, ಆದ್ದರಿಂದ ಜಲಸಂಧಿಯನ್ನು ಮತ್ತೆ ಮುಚ್ಚುವುದು ಅನಿವಾರ್ಯವಾಗಿದೆ,” ಎಂದು IRGC ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪರ್ಷಿಯನ್ ಗಲ್ಫ್ ಮತ್ತು ಓಮನ್ ಸಮುದ್ರದಲ್ಲಿ ಲಂಗರು ಹಾಕಿರುವ ಯಾವುದೇ ಹಡಗುಗಳು ಜಲಸಂಧಿಯತ್ತ ಬರುವಂತಿಲ್ಲ. ಅಪ್ಪಿತಪ್ಪಿ ಪ್ರವೇಶಿಸಲು ಪ್ರಯತ್ನಿಸಿದರೆ ಅವುಗಳನ್ನು ‘ಶತ್ರು ರಾಷ್ಟ್ರದ ಮಿತ್ರ’ ಎಂದು ಪರಿಗಣಿಸಿ ಗುರಿಯಾಗಿಸಲಾಗುವುದು ಎಂದು ಇರಾನ್ ಎಚ್ಚರಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿರುವ ಇರಾನ್, ಹಡಗುಗಳ ಮಾಲೀಕರು ಕೇವಲ ಇರಾನ್ ನೌಕಾಪಡೆಯ ಅಧಿಕೃತ ಸಂವಹನ ಚಾನಲ್‌ಗಳನ್ನು (Channel 16) ಮಾತ್ರ ಅನುಸರಿಸುವಂತೆ ಸೂಚಿಸಿದೆ.
ಒಂದು ವೇಳೆ ಸಂಚಾರಕ್ಕೆ ಅವಕಾಶ ನೀಡಿದರೂ, ಹೊಸ ಶಿಷ್ಟಾಚಾರಗಳಿಗೆ ಸ್ಪಂದಿಸುವ ಮತ್ತು ಭದ್ರತಾ ಶುಲ್ಕವನ್ನು ಪಾವತಿಸುವ ಹಡಗುಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.








