ಟೆಹ್ರಾನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ ಈಗ ಪರಮಾಣು ಕೇಂದ್ರಗಳ ಹೊಸ್ತಿಲಿಗೆ ಬಂದು ತಲುಪಿದೆ. ಇರಾನ್‌ನ ದಕ್ಷಿಣ ಕರಾವಳಿಯಲ್ಲಿರುವ ಬುಶೆಹರ್ (Bushehr) ಪರಮಾಣು ವಿದ್ಯುತ್ ಸ್ಥಾವರದ ಆವರಣದ ಮೇಲೆ ಶನಿವಾರ (ಏಪ್ರಿಲ್ 4, 2026) ಕ್ಷಿಪಣಿಯೊಂದು ಅಪ್ಪಳಿಸಿದ್ದು, ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ದೃಢಪಡಿಸಿದೆ.
ಶನಿವಾರ ಬೆಳಗ್ಗೆ ಸುಮಾರು 8:30ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ‘ಇರ್ನಾ’ (IRNA) ವರದಿ ಮಾಡಿದೆ.ಸ್ಥಾವರದ ರಕ್ಷಣಾ ಪಡೆಯ (Physical Protection Staff) ಸಿಬ್ಬಂದಿಯೊಬ್ಬರು ಕ್ಷಿಪಣಿಯ ಚೂರುಗಳು ತಗುಲಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಸಮೀಪದ ಸಹಾಯಕ ಕಟ್ಟಡವೊಂದು ಹಾನಿಗೀಡಾಗಿದೆ.
ಅದೃಷ್ಟವಶಾತ್, ಸ್ಥಾವರದ ಪ್ರಮುಖ ರಿಯಾಕ್ಟರ್ ಭಾಗಗಳಿಗೆ ಯಾವುದೇ ಹಾನಿಯಾಗಿಲ್ಲ. “ದಾಳಿಯ ನಂತರ ಯಾವುದೇ ವಿಕಿರಣ ಸೋರಿಕೆ ಕಂಡುಬಂದಿಲ್ಲ” ಎಂದು IAEA ಸ್ಪಷ್ಟಪಡಿಸಿದೆ. ಈ ಯುದ್ಧ ಆರಂಭವಾದ ನಂತರ ಬುಶೆಹರ್ ಸ್ಥಾವರವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದು ಇದು ನಾಲ್ಕನೇ ಬಾರಿ ಎಂದು ವರದಿಗಳು ತಿಳಿಸಿವೆ.








