ಬಿಲಾಸಪುರ: ಕ್ರಿಮಿನಲ್ ಪ್ರಕರಣದಲ್ಲಿ ದೋಷಮುಕ್ತರಾದ (ಖುಲಾಸೆ) ಮಾತ್ರಕ್ಕೆ, ವಜಾಗೊಂಡಿದ್ದ ಅವಧಿಯ ಸಂಪೂರ್ಣ ಬಾಕಿ ವೇತನವನ್ನು ಹಕ್ಕಿನಂತೆ ಪಡೆಯಲು ಉದ್ಯೋಗಿಗೆ ಯಾವುದೇ ಅಧಿಕಾರವಿರುವುದಿಲ್ಲ ಎಂದು ಛತ್ತೀಸ್ ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚೀಫ್ ಜಸ್ಟಿಸ್ ರಮೇಶ್ ಸಿನ್ಹಾ ಮತ್ತು ಜಸ್ಟಿಸ್ ರವೀಂದ್ರ ಕುಮಾರ್ ಅಗರ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಸ್ಪಷ್ಟನೆ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ‘ಕೆಲಸವಿಲ್ಲದೆ ವೇತನವಿಲ್ಲ’ (No Work, No Pay) ಎಂಬ ತತ್ವವು ಅನ್ವಯಿಸುತ್ತದೆ ಎಂದು ಹೇಳಿದೆ. ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವಾಗ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಸದರಿ ಉದ್ಯೋಗಿಯು ಸಹಾಯಕ ಶ್ರೇಣಿ-1 (ಸಿವಿಲ್) ಹುದ್ದೆಗೆ ನೇಮಕಗೊಂಡು, ನಂತರ ಮೇಲ್ವಿಚಾರಕರಾಗಿ ಬಡ್ತಿ ಪಡೆದಿದ್ದರು. ಈ ನಡುವೆ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ, ಇಲಾಖೆಯು ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಇದರ ವಿರುದ್ಧ ಉದ್ಯೋಗಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕಾನೂನು ಹೋರಾಟದ ಅವಧಿಯಲ್ಲೇ ಅವರು ನಿವೃತ್ತಿ ವಯಸ್ಸನ್ನೂ ತಲುಪಿದ್ದರು. ಅಂತಿಮವಾಗಿ ಹೈಕೋರ್ಟ್ ಅವರನ್ನು ಆರೋಪಗಳಿಂದ ಮುಕ್ತಗೊಳಿಸಿತು (ಖುಲಾಸೆ ಮಾಡಿತು).
ಕೋರ್ಟ್ ಮೆಟ್ಟಿಲೇರಿದ ವಿವಾದ:
ಖುಲಾಸೆಯಾದ ಬೆನ್ನಲ್ಲೇ ಇಲಾಖೆಯು ಅವರ ವಜಾ ಆದೇಶವನ್ನು ಹಿಂಪಡೆಯಿತಾದರೂ, ವಜಾಗೊಂಡ ದಿನದಿಂದ ನಿವೃತ್ತಿಯವರೆಗಿನ ಅವಧಿಯ ನೈಜ ವೇತನ ಮತ್ತು ಇತರ ಆರ್ಥಿಕ ಸೌಲಭ್ಯಗಳನ್ನು ನೀಡಲು ನಿರಾಕರಿಸಿತು. ಇಲಾಖೆಯ ಈ ನಿರ್ಧಾರವನ್ನು ಪ್ರಶ್ನಿಸಿ ಉದ್ಯೋಗಿ ಮೊದಲು ಸಿಂಗಲ್ ಬೆಂಚ್ ಮೆಟ್ಟಿಲೇರಿದ್ದರು. ಆದರೆ ಸಿಂಗಲ್ ಬೆಂಚ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಅವರು ಡಬಲ್ ಬೆಂಚ್ ಗೆ (ವಿಭಾಗೀಯ ಪೀಠ) ಮೇಲ್ಮನವಿ ಸಲ್ಲಿಸಿ, “ನನ್ನ ಮೇಲಿನ ಆರೋಪ ಸಾಬೀತಾಗದೆ ಖುಲಾಸೆಯಾಗಿರುವುದರಿಂದ, ನಾನು ಸೇವೆಯಿಂದ ಹೊರಗಿದ್ದ ಅವಧಿಯ ವೇತನ ಮತ್ತು ಭತ್ಯೆಗಳನ್ನು ಪಡೆಯಲು ಅರ್ಹನಾಗಿದ್ದೇನೆ” ಎಂದು ವಾದಿಸಿದ್ದರು.
ಹೈಕೋರ್ಟ್ ನೀಡಿದ ತೀರ್ಪು:
ಸುಪ್ರೀಂ ಕೋರ್ಟ್‌ನ ಹಲವು ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಸೇವೆಯಿಂದ ವಜಾಗೊಂಡ ಉದ್ಯೋಗಿ, ನಂತರದ ದಿನಗಳಲ್ಲಿ ಮೇಲ್ಮನವಿಯಲ್ಲಿ ಖುಲಾಸೆಯಾದರೂ ಸಹ, ಹಳೆಯ ಬಾಕಿ ವೇತನವನ್ನು ತನ್ನ ಹಕ್ಕಿನಂತೆ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.








