ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮಹಾಸಮರಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಇಂದು ರಾತ್ರಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ತಮ್ಮ ಎರಡನೇ ಟ್ರೋಫಿಗಾಗಿ ಸೆಣಸಾಡಲಿವೆ. ಆರ್‌ಸಿಬಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
ಆದರೆ, ಈ ಭಾರಿ ಸಂಭ್ರಮಾಚರಣೆಯ ನೆಪದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಅತ್ಯಂತ ಕಠಿಣವಾದ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕಳೆದ ವರ್ಷದ ಕರಾಳ ನೆನಪು: ಪೊಲೀಸರ ಕಠಿಣ ನಿಲುವಿಗೆ ಕಾರಣವೇನು?
ಕಳೆದ 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ತನ್ನ ಚೊಚ್ಚಲ ಪ್ರಶಸ್ತಿ ಗೆದ್ದಾಗ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ವಿಪರೀತ ಸಂಭ್ರಮಾಚರಣೆ ಮತ್ತು ಕಾಲ್ತುಳಿತದಲ್ಲಿ 11 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು ಹಾಗೂ ಸರ್ಕಾರ ಮತ್ತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಭಾರಿ ಆಕ್ರೋಶ ಎದುರಿಸಬೇಕಾಗಿ ಬಂದಿತ್ತು. ಈ ಕರಾಳ ಘಟನೆ ನಡೆದು ಕೇವಲ ಒಂದು ವರ್ಷವಾಗಿದ್ದು, ಆ ಗಾಯಗಳು ಇನ್ನು ಹಸಿಯಾಗಿಯೇ ಇವೆ. ಆದ್ದರಿಂದ ಈ ಬಾರಿ ಪೊಲೀಸರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ.
ಬೆಂಗಳೂರು ಸಂಚಾರಿ ಮತ್ತು ಸುರಕ್ಷತಾ ಮಾರ್ಗಸೂಚಿಗಳು: ಏನುಂಟು? ಏನಿಲ್ಲ?
ಪಂದ್ಯದ ಫಲಿತಾಂಶದ ನಂತರ ನಗರದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಈ ಕೆಳಗಿನ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ:
ಸಾರ್ವಜನಿಕ ಸಂಭ್ರಮಾಚರಣೆಗೆ ನಿಷೇಧ: ಪಂದ್ಯ ಮುಗಿದ ತಕ್ಷಣ ಸಾರ್ವಜನಿಕ ರಸ್ತೆಗಳು ಹಾಗೂ ಮೈದಾನಗಳಲ್ಲಿ ಗುಂಪುಗೂಡಿ ಸಂಭ್ರಮಿಸುವಂತಿಲ್ಲ.
ಅನುಮತಿಯಿಲ್ಲದೆ LED ಸ್ಕ್ರೀನ್ ಹಾಕುವಂತಿಲ್ಲ: ಸಾರ್ವಜನಿಕ ರಸ್ತೆಗಳಿಗೆ ಮುಖಮಾಡಿ ದೊಡ್ಡ ಎಲ್‌ಇಡಿ (LED) ಪರದೆಗಳನ್ನು ಅಳವಡಿಸುವುದು ಕಾನೂನುಬಾಹಿರ. ಶಾಪಿಂಗ್ ಮಾಲ್‌ಗಳು, ಬಾರ್‌ಗಳು ಅಥವಾ ಇತರೆ ಸಾರ್ವಜನಿಕ ಸ್ಥಳಗಳ ಹೊರಗೆ ಲೈವ್ ಸ್ಕ್ರೀನಿಂಗ್ ಮಾಡುವಂತಿಲ್ಲ.
ಬೈಕ್ ರ್ಯಾಗಲಿ ಮತ್ತು ಸ್ಟಂಟ್‌ಗಳಿಗೆ ಬ್ರೇಕ್: ರಸ್ತೆ ತಡೆ ಮಾಡುವುದು, ಬೈಕ್ ರ್ಯಾ್ಲಿ ನಡೆಸುವುದು, ವೀಲಿಂಗ್-ಸ್ಟಂಟ್‌ಗಳು ಮತ್ತು ಅತಿ ವೇಗದ ಚಾಲನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪಟಾಕಿ ಮತ್ತು ಹಾರ್ನ್ ಸದ್ದು ಬೇಡ: ಅತಿಯಾಗಿ ಪಟಾಕಿ ಸಿಡಿಸುವುದು ಹಾಗೂ ಅನಗತ್ಯವಾಗಿ ಹಾರ್ನ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಬಿಡಬೇಕು.
ಮದ್ಯಪಾನ ನಿಷೇಧ: ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸೋಷಿಯಲ್ ಮೀಡಿಯಾ ವಾರ್ನಿಂಗ್: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ಗಳು, ದ್ವೇಷದ ಭಾಷಣ ಅಥವಾ ವದಂತಿಗಳನ್ನು ಹರಡುವಂತಿಲ್ಲ. ಎದುರಾಳಿ ತಂಡದ ಅಭಿಮಾನಿಗಳನ್ನು ಚುಡಾಯಿಸುವುದು ಅಥವಾ ಅಪಹಾಸ್ಯ ಮಾಡಬಾರದು.
ಸವಾಲಿನ ದಿನಗಳಲ್ಲಿ ಬೆಂಗಳೂರು ಪೊಲೀಸ್!
ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆಯೇ ಐಪಿಎಲ್ ಫೈನಲ್ ಕೂಡ ಬಂದಿರುವುದರಿಂದ ಬೆಂಗಳೂರು ಪೊಲೀಸರಿಗೆ ಈ ವಾರ ಅತ್ಯಂತ ಕಾರ್ಯನಿರತ ಹಾಗೂ ಸವಾಲಿನದ್ದಾಗಿದೆ. ಕೇವಲ ಮೂರು ದಿನಗಳಲ್ಲಿ ಪೊಲೀಸರು 2-3 ಪ್ರಮುಖ ಘಟನೆಗಳ ಭದ್ರತೆಯನ್ನು ನಿರ್ವಹಿಸಬೇಕಾಗಿದೆ.
ಈಗಾಗಲೇ ಸಿದ್ಧತೆ ನಡೆಸಿರುವ ಬೆಂಗಳೂರು ಸಂಚಾರಿ ಪೊಲೀಸರು, ನಗರದ ಕೆಲವು ಪ್ರಮುಖ ರಸ್ತೆಗಳ ಮಾರ್ಗ ಬದಲಾವಣೆ ಹಾಗೂ ರಸ್ತೆ ಬಂದ್ ಮಾಡಲು ಯೋಜಿಸಿದ್ದಾರೆ. ಅತಿ ವೇಗ ಮತ್ತು ಬೇಜವಾಬ್ದಾರಿಯ ಚಾಲನೆ ತಡೆಯಲು ತಪಾಸಣೆಯನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸರ ಮನವಿ: “ಆರ್‌ಸಿಬಿ ಗೆದ್ದರೆ ನಗರದಲ್ಲಿ ಸೌಹಾರ್ದಯುತವಾಗಿ ಸಂಭ್ರಮಿಸಿ. ಪ್ರತಿಯೊಬ್ಬ ನಾಗರಿಕನೂ ಕಾನೂನು ಪಾಲನೆ ಮಾಡಿ, ಪೊಲೀಸರೊಂದಿಗೆ ಸಹಕರಿಸಿ ಜವಾಬ್ದಾರಿಯುತವಾಗಿ ವರ್ತಿಸಬೇಕು.”








