ಕೀವ್: ಉಕ್ರೇನ್ ಮೇಲೆ ರಷ್ಯಾ ತನ್ನ ವಾಯು ದಾಳಿಯನ್ನು ತೀವ್ರಗೊಳಿಸಿದೆ. ಶನಿವಾರ ಮುಂಜಾನೆ ರಷ್ಯಾ ಉಡಾಯಿಸಿದ ನೂರಾರು ಡ್ರೋನ್‌ಗಳು ಉಕ್ರೇನ್‌ನ ವಿವಿಧ ನಗರಗಳನ್ನು ಗುರಿಯಾಗಿಸಿದ್ದು, ವಿಶೇಷವಾಗಿ ನಿಕೋಪೋಲ್ (Nikopol) ನಗರದ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ.
ಡಿಪ್ರೊಪೆಟ್ರೋವ್ಸ್ಕ್ ಪ್ರಾಂತ್ಯದ ನಿಕೋಪೋಲ್ ನಗರದ ಮಾರುಕಟ್ಟೆಯ ಮೇಲೆ ರಷ್ಯಾದ ಡ್ರೋನ್ ನೇರವಾಗಿ ಅಪ್ಪಳಿಸಿದೆ. ಈ ಘಟನೆಯಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ ಒಟ್ಟು ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದಾಳಿಯಲ್ಲಿ ಸುಮಾರು 19 ಮಂದಿ ಗಾಯಗೊಂಡಿದ್ದು, ಇದರಲ್ಲಿ 14 ವರ್ಷದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಾದೇಶಿಕ ಗವರ್ನರ್ ಒಲೆಕ್ಸಾಂಡರ್ ಗಂಜಾ ತಿಳಿಸಿದ್ದಾರೆ.
ಉಕ್ರೇನ್‌ನ ಉತ್ತರದ ಸುಮಿ (Sumy) ಪ್ರಾಂತ್ಯದ ವಸತಿ ಸಮುಚ್ಚಯಗಳ ಮೇಲೆ ನಡೆದ ದಾಳಿಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. 16 ಅಂತಸ್ತಿನ ಕಟ್ಟಡವೊಂದು ಬೆಂಕಿಗೆ ಆಹುತಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಉಕ್ರೇನ್ ವಾಯುಪಡೆಯ ವರದಿಯ ಪ್ರಕಾರ, ರಷ್ಯಾ ಒಂದೇ ರಾತ್ರಿಯಲ್ಲಿ ಒಟ್ಟು 286 ಡ್ರೋನ್‌ಗಳನ್ನು ಉಡಾಯಿಸಿತ್ತು. ಇವುಗಳಲ್ಲಿ 260 ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಉಕ್ರೇನ್ ಯಶಸ್ವಿಯಾಗಿದೆ.








