ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತಾರಕಕ್ಕೇರಿದೆ. ಅಮೆರಿಕ ಸೇನೆಯ ಅತ್ಯಂತ ಶಕ್ತಿಶಾಲಿ ಹೆಲಿಕಾಪ್ಟರ್ಗಳಲ್ಲಿ ಒಂದಾದ CH-47 ಚಿನೂಕ್, ಕುವೈತ್ನಲ್ಲಿ ಪತನಗೊಂಡಿದೆ ಎಂದು ಇರಾನ್ನ ಸರ್ಕಾರಿ ಮಾಧ್ಯಮಗಳು ಶನಿವಾರ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿವೆ.
ಇರಾನ್ನ ‘ಪ್ರೆಸ್ ಟಿವಿ’ ಪ್ರಕಾರ, ಕುವೈತ್ನಲ್ಲಿರುವ ಅಮೆರಿಕದ ಸೇನಾ ನೆಲೆಯಾದ ‘ಕ್ಯಾಂಪ್ ಬ್ಯೂಹ್ರಿಂಗ್’ ಸಮೀಪ ಈ ಹೆಲಿಕಾಪ್ಟರ್ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.ಇರಾನ್ ಮೇಲೆ ಪತನಗೊಂಡಿದ್ದ ಅಮೆರಿಕದ F-15E ಸ್ಟ್ರೈಕ್ ಈಗಲ್ ಯುದ್ಧ ವಿಮಾನದ ಪೈಲಟ್ ಅನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಈ ಚಿನೂಕ್ ಹೆಲಿಕಾಪ್ಟರ್ ತೊಡಗಿತ್ತು ಎಂದು ಹೇಳಲಾಗಿದೆ. ಈ ವೇಳೆ ಇರಾನ್ ಉಡಾಯಿಸಿದ ಕ್ಷಿಪಣಿ ಅಥವಾ ಡ್ರೋನ್ ದಾಳಿಗೆ ಇದು ಬಲಿಯಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆಯ ಕುರಿತು ಅಮೆರಿಕದ ಪೆಂಟಗನ್ ಅಥವಾ ಶ್ವೇತಭವನ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಇರಾನ್ ಬಿಡುಗಡೆ ಮಾಡಿರುವ ಫೋಟೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ








