ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ರೇಷನ್ ಕಾರ್ಡ್ ಪಡೆಯಲು ನಿಗದಿಪಡಿಸಲಾಗಿರುವ ಕನಿಷ್ಠ ವಾರ್ಷಿಕ ಆದಾಯದ ಮಿತಿಯನ್ನು ಪ್ರಸ್ತುತ ಇರುವ ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಆಡಳಿತ ಸುಧಾರಣಾ ಆಯೋಗವು ಬಿಪಿಎಲ್ ಕಾರ್ಡ್‌ಗಾಗಿ ವಾರ್ಷಿಕ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ. ಇದರ ಬಗ್ಗೆ ಸರ್ಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ. ಸದ್ಯ ರಾಜ್ಯದಲ್ಲಿ 1.24 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, ಸುಮಾರು 4.50 ಕೋಟಿ ಜನರು ಇದರ ಫಲಾನುಭವಿಗಳಾಗಿದ್ದಾರೆ. ಅಂದರೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 73 ರಷ್ಟು ಮಂದಿ ಬಿಪಿಎಲ್ ವ್ಯಾಪ್ತಿಗೆ ಬರುತ್ತಾರೆ ಎಂದರು.
ಇತರ ರಾಜ್ಯಗಳ ಹೋಲಿಕೆ: ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಪಿಎಲ್ ಫಲಾನುಭವಿಗಳ ಪ್ರಮಾಣ ಶೇ. 52 ದಾಟಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಡ್‌ಗಳ ಮರುಪರಿಶೀಲನೆ
ಕೇಂದ್ರ ಸರ್ಕಾರದ ಸೂಚನೆಯಂತೆ ಅರ್ಹವಲ್ಲದ ಸುಮಾರು 7.76 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್ ವ್ಯಾಪ್ತಿಯಿಂದ ಹೊರಗಿಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಶೇ. 50 ರಷ್ಟು ಕಾರ್ಡ್‌ಗಳ ಪರಿಶೀಲನೆ ಪೂರ್ಣಗೊಂಡಿದ್ದು, ಉಳಿದವುಗಳನ್ನು ಶೀಘ್ರದಲ್ಲೇ ಪರಿಶೀಲಿಸಿ ಎಪಿಎಲ್ ಕಾರ್ಡ್ ವ್ಯಾಪ್ತಿಗೆ ತರಲಾಗುವುದು ಎಂದು ಅವರು ಹೇಳಿದರು.








