ಬೆಂಗಳೂರು : ಗುತ್ತಿಗೆದಾರರಿಂದ ಕಮಿಷನ್ ಆರೋಪದ ವಿಚಾರವಾಗಿ ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ. ಅದನ್ನು ಕಂಡು ಹಿಡಿಯುವುದಕ್ಕೆ ಆಗಲ್ಲ. ಹಿಂದಿನ ಸರ್ಕಾರ ಮಾಡಿರುವ ತಪ್ಪು ಅದು. ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಜಾಸ್ತಿ ಬಾಕಿ ಇದೆ. ಕಾಮಗಾರಿ ನಿಲ್ಲಿಸುವುದಕ್ಕೆ ಆಗಲ್ಲ, ಅವರಿಗೆ ಕಂಫರ್ಟ್ ಇದ್ದ ಕಡೆ ಟೆಂಡರ್ ಹಾಕೇ ಹಾಕ್ತಾರೆ ಎಂದರು. ಎಂದು ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ನಮ್ಮ ಇಲಾಖೆಯಲ್ಲಿ 12 ಸಾವಿರ ಕೋಟಿ ರೂ. ಬಾಕಿ ಇತ್ತು. ಮೂರು ಸಾವಿರ ಕೋಟಿ ಕೊಡಲಾಗಿದೆ. 9 ಸಾವಿರ ಕೋಟಿ ಬಾಕಿ ಇದೆ. ಅದನ್ನು ಬ್ಯಾಲೆನ್ಸ್ ಮಾಡುತ್ತೇವೆ. ನಾವು ನಿಮಗೆ ಅಪ್ರೂವ್ ಕೊಟ್ಟಿಲ್ಲ ಅಂತಲೂ ಚರ್ಚೆ ಆಗಿದೆ. ನಾವು ಕೊಡುವುದರಲ್ಲೇ ಬ್ಯಾಲೆನ್ಸ್ ಮಾಡಿ ಅಂತ ಚರ್ಚೆ ಆಗಿದೆ. ಇದರಲ್ಲಿ ಅಧಿಕಾರಿಗಳ ಲೋಪ ಎನ್ನಲು ಬರಲ್ಲ. ಹಿಂದಿನ ಸರ್ಕಾರವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ನಮ್ಮಲ್ಲಿರುವ ಬಜೆಟ್ಗೆ ಸರಿದೂಗಿಸುವ ಕೆಲಸ ಮಾಡುತ್ತಿದ್ದೇವೆ. ಇವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮುಂದೆ ತೋರಿಸುತ್ತೇನೆ. ನಾವು ಹೊಸ ವರ್ಕ್ ಕೊಟ್ಟಿಲ್ಲ. ಬ್ಯಾಲೆನ್ಸ್ ಮಾಡುತ್ತಿದ್ದೇವೆ. ನಮ್ಮಿಂದ ಅಪ್ರೂವ್ ತಗೊಂಡಿದ್ದೀರಾ ಅಂತ ಆರ್ಥಿಕ ಇಲಾಖೆ ಕೇಳುತ್ತೆ. ಬೇರೆ ಮಂತ್ರಿಗಳದ್ದು ನಾನು ಉತ್ತರ ಕೊಡುವುದಕ್ಕೆ ಆಗಲ್ಲ. ಅವರೇ ಸ್ಪಷ್ಟನೆ ಕೊಡಬೇಕು. ಆ ಕಡೆಯುವರು ಈ ಕಡೆ ಆರೋಪ ಮಾಡುತ್ತಾರೆ, ಈ ಕಡೆಯವರು ಆ ಕಡೆಗೆ ಆರೋಪ ಮಾಡುತ್ತಾರೆ. ಕಮಿಷನ್ ನಿಯಂತ್ರಣ ಮಾಡಬೇಕು ಅಷ್ಟೇ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಿಕೊಳ್ಳಬೇಕಲ್ವಾ? ಸಿಎಂ ಇದ್ದಾರೆ, ಲೋಕಾಯುಕ್ತ ಇದೆ. ಅವರ ಗಮನಕ್ಕೆ ತರಲಿ. ಬಾಕಿ ಅಷ್ಟೊಂದು ಯಾಕೆ ಇದೆ ಅಂತಾ ಚಿಂತನೆ ಆಗಬೇಕು. ಬಜೆಟ್ ಬೆಂಬಲ ಇಲ್ಲದೇ ಬಿಜೆಪಿ ತನ್ನ ಅವಧಿಯಲ್ಲಿ ಕಾಮಗಾರಿ ಟೆಂಡರ್ ಕೊಟ್ಟಿದೆ. ಆ ರೀತಿ ಬಿಜೆಪಿ ಸರ್ಕಾರ ಮಾಡದೇ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆಲಸ ಆಗಿದೆ, ಪೇಮೆಂಟ್ ಮಾಡುವುದಕ್ಕೆ ಸಮಯ ಬೇಕು.








