ಅಹಮದಾಬಾದ್ : ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೂ ಗುಜರಾತ್ ರಾಜ್ಯದ ಆರು ನಗರಗಳಲ್ಲಿ ನಡೆಯುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್ (ಲಾಂಛನ) ಅನಾವರಣ ಮಾಡಲಾಗಿದೆ. 7 ವರ್ಷಗಳ ಬಳಿಕ ರಾಷ್ಟ್ರೀಯ ಗೇಮ್ಸ್ ನಡೆಯುತ್ತಿದ್ದು, ಅದಕ್ಕೆ ಗುಜರಾತ್ ಆತಿಥ್ಯ ವಹಿಸ್ತಿದೆ.
ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್ (ಲಾಂಛನ) ಅನಾವರಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಹಮದಾಬಾದ್ ಅನ್ನು ಸದ್ಯದಲ್ಲೇ ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಮಾಡಲಿದ್ದೇವೆ ಎಂದು ಘೋಷಿಸಿದ್ದಾರೆ. ‘10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗ ಖೇಲ್ ಮಹಾಕುಂಭ್ ಆರಂಭಿಸಿದ್ದರು. ಆ ಸಮಯದಲ್ಲಿ ಗುಜರಾತ್ ಜಾಗತಿಕ ಕ್ರೀಡಾ ಭೂಪಟದಲ್ಲಿ ಕಾಣಸಿಗುತ್ತಿರಲಿಲ್ಲ. ಆದರೆ ಈಗ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ ನರೇಂದ್ರ ಮೋದಿ ಕ್ರೀಡಾಂಗಣವಿದೆ. ಅತಿ ಶೀಘ್ರದಲ್ಲಿ ಅಹಮದಾಬಾದ್ ಅನ್ನು ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಮಾಡಲಿದ್ದೇವೆ’ ಎಂದು ಘೋಷಿಸಿದರು.
ಗುಜರಾತಿಯಲ್ಲಿ ಸಿಂಹವನ್ನು ‘ಸಾವಜ್’ ಎಂದು ಕರೆಯಲಾಗುತ್ತದೆ. ಇದನ್ನೇ ಕ್ರೀಡಾಕೂಟದ ಅಧಿಕೃತ ಮ್ಯಾಸ್ಕಟ್ ಆಗಿ ರೂಪಿಸಲಾಗಿದೆ. ಅತಿವೇಗವಾಗಿ ಬೆಳೆಯುತ್ತಿರುವ ಭಾರತ, ಜಾಗತಿಕ ಮಟ್ಟದಲ್ಲಿ ನಂ.೧ ಆಗಲಿದೆ ಎನ್ನುವುದನ್ನು ಈ ಲಾಂಛನವು ಪ್ರತಿನಿಧಿಸಲಿದೆ. ‘ಇನ್ನು ಜುಡೇಗಾ ಇಂಡಿಯಾ, ಜೀತೇಗಾ ಇಂಡಿಯಾ’ ಎನ್ನುವುದು ಕ್ರೀಡಾಕೂಟದ ಅಧಿಕೃತ ಗೀತೆ ಆಗಿದೆ. ಖ್ಯಾತ ಬಾಲಿವುಡ್ ಗಾಯಕ ಸುಖ್ವಿಂದರ್ ಸಿಂಗ್ ಈ ಗೀತೆಯನ್ನು ಹಾಡಿದ್ದಾರೆ.
ಅಮಿತ್ ಶಾ ಅವರ ಮಾತು ನೆರೆದಿದ್ದ 10000ಕ್ಕೂ ಹೆಚ್ಚು ಮಂದಿಯನ್ನು ಉತ್ಸುಕಗೊಳಿಸಿತು. ಗಾಂಧಿನಗರದ ಸಂಸದರೂ ಆಗಿರುವ ಕೇಂದ್ರ ಗೃಹ ಸಚಿವ ಶಾ ಅದ್ಧೂರಿ ಕರ್ಟನ್ ರೈಸರ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಕಾರ್ಯಕ್ರಮದಲ್ಲಿ ಗುಜರಾತ್ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಹ ಪಾಲ್ಗೊಂಡಿದ್ದರು.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ
‘ಒಂದು ಕಾಲದಲ್ಲಿ ನಾವು ಗುಜ್ಜುಗಳನ್ನು ಕೇವಲ ವ್ಯಾಪಾರಿಗಳನ್ನಾಗಿ ನೋಡಲಾಗುತ್ತಿತ್ತು. ಆದರೆ ಮೋದಿ ಅವರು ಖೇಲ್ ಮಹಾಕುಂಭ್ ಆರಂಭಿಸಿ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದರು. ಈ ಆವೃತ್ತಿಯಲ್ಲಿ ಬರೋಬ್ಬರಿ 55 ಲಕ್ಷ ಯುವಕರು ಪಾಲ್ಗೊಂಡಿದ್ದರು ಎನ್ನುವುದು ಬಹಳ ವಿಶೇಷ. ಕೂಟದಲ್ಲಿ ವಿಜೇತರಿಗೆ ಒಟ್ಟು 29 ಕೋಟಿ ರುಪಾಯಿ ಬಹುಮಾನ ಮೊತ್ತವನ್ನು ವಿತರಿಸಿದೆವು ಎನ್ನುವುದು ಹೆಮ್ಮೆಯ ವಿಚಾರ’ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದರು.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ ‘7 ವರ್ಷಗಳ ಬಳಿಕ ರಾಷ್ಟ್ರೀಯ ಗೇಮ್ಸ್ ನಡೆಯುತ್ತಿರುವುದು ಖುಷಿ ನೀಡಿದೆ. ಈ ಆವೃತ್ತಿ ಈ ಹಿಂದಿನ ಆವೃತ್ತಿಗಳಿಗಿಂತ ಅತಿದೊಡ್ಡ ಹಾಗೂ ಗ್ರ್ಯಾಂಡ್ ಆಗಿ ಇರಲಿದೆ’ ಎಂದರು. ‘ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಲು ಹಲವು ವರ್ಷಗಳ ಸಿದ್ಧತೆ ಅಗತ್ಯವಿರುತ್ತದೆ. ಆದರೆ ಗುಜರಾತ್ ಮೂರು ತಿಂಗಳುಗಳಿಗಿಂತ ಕಡಿಮೆ ಸಮಯದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕ್ರೀಡಾಪಟುಗಳು, ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಎಲ್ಲಾ ಸೇರಿ ಕ್ರೀಡಾಕೂಟದಲ್ಲಿ 12000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ಠಾಕೂರ್ ಹೇಳಿದರು.