ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಆದರೆ ಯಾವುದೇ ಹೊಸ ಮೆಸೇಜ್, ಕಾಲ್ ಅಥವಾ ನೋಟಿಫಿಕೇಶನ್ ಬರದೇ ಇದ್ದರೂ, ಜೇಬಿನಿಂದ ಅಥವಾ ಬ್ಯಾಗ್ನಿಂದ ಫೋನ್ ತೆಗೆದು ಸುಮ್ಮನೆ ಸ್ಕ್ರೀನ್ ಆನ್ ಮಾಡಿ ನೋಡುವುದು ನಮ್ಮಲ್ಲಿ ಬಹುತೇಕರ ದೈನಂದಿನ ಅಭ್ಯಾಸವಾಗಿಬಿಟ್ಟಿದೆ.
ಕೆಲವೊಮ್ಮೆ ಫೋನ್ ಸೈಲೆಂಟ್ ಆಗಿದ್ದರೂ ವೈಬ್ರೇಟ್ ಆದಂತೆ ಭಾಸವಾಗಿ ಫೋನ್ ಕೈಗೆತ್ತಿಕೊಳ್ಳುತ್ತೇವೆ. ಇಂತಹ ವಿಚಿತ್ರ ವರ್ತನೆಯ ಹಿಂದಿರುವ ಅಸಲಿ ಮನೋವಿಜ್ಞಾನ ಮತ್ತು ಮಾನಸಿಕ ಕಾರಣಗಳೇನು ಎಂಬುದನ್ನು ತಜ್ಞರು ವರದಿಯೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಪದೇ ಪದೇ ಫೋನ್ ಚೆಕ್ ಮಾಡುವ ಈ ಅಭ್ಯಾಸದ ಹಿಂದೆ ಪ್ರಮುಖವಾಗಿ ನಾಲ್ಕು ಮಾನಸಿಕ ಕಾರಣಗಳಿವೆ:
1. ಡೋಪಮೈನ್ ಮತ್ತು ‘ಪ್ರತಿಫಲದ ಹಪಾಹಪಿ’ (Dopamine Driven Loop):
ನಮ್ಮ ಮೆದುಳಿನಲ್ಲಿ ‘ಡೋಪಮೈನ್’ (Dopamine) ಎಂಬ ರಾಸಾಯನಿಕ ಬಿಡುಗಡೆಯಾದಾಗ ನಮಗೆ ತೃಪ್ತಿ ಅಥವಾ ಸಂತೋಷದ ಅನುಭವವಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಒಂದು ಲೈಕ್ ಅಥವಾ ಮೆಸೇಜ್ ನಮಗೆ ತಾತ್ಕಾಲಿಕ ಸಂತೋಷ ನೀಡುತ್ತದೆ. ಹೀಗಾಗಿ, ನಮ್ಮ ಮೆದುಳು “ಈ ಬಾರಿ ಫೋನ್ ತೆರೆದಾಗ ಏನಾದರೂ ಹೊಸತು ಸಿಗಬಹುದು” ಎಂಬ ನಿರೀಕ್ಷೆಯಲ್ಲಿ ಪದೇ ಪದೇ ಫೋನ್ ಚೆಕ್ ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಇದನ್ನು ಮನೋವಿಜ್ಞಾನದಲ್ಲಿ ‘ವೇರಿಯಬಲ್ ರಿವಾರ್ಡ್ಸ್’ (Variable Rewards) ಎಂದು ಕರೆಯಲಾಗುತ್ತದೆ.
2. ಫೋಮೋ ಕಾಟ (FOMO – Fear Of Missing Out):
”ಜಗತ್ತಿನಲ್ಲಿ ಏನೋ ನಡೆದುಹೋಗುತ್ತಿದೆ, ನಾನದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂಬ ಆತಂಕವೇ ಈ ಫೋಮೋ (FOMO). ಗೆಳೆಯರು ಎಲ್ಲಿಗೆ ಹೋದರು? ದೇಶದಲ್ಲಿ ಏನು ನಡೆಯುತ್ತಿದೆ? ಎಂಬ ಅತಿಯಾದ ಕುತೂಹಲ ಮತ್ತು ಆತಂಕ ನಮ್ಮನ್ನು ನಮಗೇ ತಿಳಿಯದಂತೆ ಫೋನ್ ಕಡೆಗೆ ಸೆಳೆಯುತ್ತದೆ.
3. ಫ್ಯಾಂಟಮ್ ವೈಬ್ರೇಷನ್ ಸಿಂಡ್ರೋಮ್ (Phantom Vibration Syndrome):
ಪೋನಿಗೆ ಯಾವುದೇ ಮೆಸೇಜ್ ಬರದೇ ಇದ್ದರೂ ಪ್ಯಾಂಟ್ ಜೇಬಿನಲ್ಲಿ ಫೋನ್ ವೈಬ್ರೇಟ್ ಆದಂತೆ ಭಾಸವಾಗುವುದನ್ನು ನೀವು ಗಮನಿಸಿರಬಹುದು. ಇದನ್ನು ವಿಜ್ಞಾನಿಗಳು ‘ಫ್ಯಾಂಟಮ್ ವೈಬ್ರೇಷನ್ ಸಿಂಡ್ರೋಮ್’ ಎಂದು ಕರೆಯುತ್ತಾರೆ. ನಿರಂತರವಾಗಿ ನೋಟಿಫಿಕೇಶನ್ ನಿರೀಕ್ಷೆಯಲ್ಲಿರುವ ನಮ್ಮ ಮಿದುಳು, ಸ್ನಾಯುಗಳ ಸಣ್ಣ ಚಲನೆಯನ್ನು ಅಥವಾ ಬಟ್ಟೆಯ ಘರ್ಷಣೆಯನ್ನೂ ಫೋನ್ ವೈಬ್ರೇಷನ್ ಎಂದೇ ತಪ್ಪಾಗಿ ಭಾವಿಸುತ್ತದೆ.
4. ಬೇಸರ ಮತ್ತು ಒಂಟಿತನದಿಂದ ತಪ್ಪಿಸಿಕೊಳ್ಳುವ ಹಾದಿ:
ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕುಳಿತಾಗ ಅಥವಾ ಕಠಿಣವಾದ ಕೆಲಸದಿಂದ ಮನಸ್ಸು ಬೇರೆಡೆಗೆ ಸೆಳೆಯಲು (Procrastination) ನಾವು ಫೋನ್ ಅನ್ನು ಒಂದು ‘ಆಶ್ರಯ ತಾಣ’ ಮಾಡಿಕೊಳ್ಳುತ್ತೇವೆ. ಬೇಸರವನ್ನು ಕಳೆಯಲು ಇದೊಂದು ಸುಲಭದ ದಾರಿಯಾಗಿ ನಮ್ಮ ಮೆದುಳಿಗೆ ರೂಢಿಯಾಗಿಬಿಟ್ಟಿರುತ್ತದೆ.
ಇದರಿಂದ ಹೊರಬರಲು ತಜ್ಞರ ಸರಳ ಸಲಹೆಗಳು:
ನೋಟಿಫಿಕೇಶನ್ ಆಫ್ ಮಾಡಿ: ಅಗತ್ಯವಿಲ್ಲದ ಆ್ಯಪ್ಗಳ ನೋಟಿಫಿಕೇಶನ್ಗಳನ್ನು ಸಂಪೂರ್ಣವಾಗಿ ಮ್ಯೂಟ್ ಮಾಡಿ.
ಕಣ್ಣಿಗೆ ಕಾಣದಂತೆ ಇಡಿ: ಕೆಲಸ ಮಾಡುವಾಗ ಅಥವಾ ಓದುವಾಗ ಫೋನ್ ಅನ್ನು ಬೇರೆ ಕೋಣೆಯಲ್ಲಿ ಅಥವಾ ಬ್ಯಾಗ್ನೊಳಗೆ ಇಡಿ (Out of sight, out of mind).
ಸ್ಕ್ರೀನ್ ಟೈಮ್ ಮಿತಿ: ದಿನಕ್ಕೆ ಇಷ್ಟೇ ಗಂಟೆ ಫೋನ್ ಬಳಸಬೇಕು ಎಂಬ ನಿಯಮ ಹಾಕಿಕೊಳ್ಳಿ.
ಡಿಜಿಟಲ್ ಡಿಟಾಕ್ಸ್: ವಾರದಲ್ಲಿ ಕನಿಷ್ಠ ಕೆಲವು ಗಂಟೆಗಳ ಕಾಲ ಫೋನ್ನಿಂದ ಸಂಪೂರ್ಣವಾಗಿ ದೂರವಿರಿ.








