ನವದೆಹಲಿ:ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸೋಷಿಯಲ್ ಮೀಡಿಯಾ ಮೆಸೆಂಜರ್ ಆ್ಯಪ್ ‘ಟೆಲಿಗ್ರಾಂ’ (Telegram) ಗೆ ಭಾರತ ಸರ್ಕಾರ ಬಿಗ್ ಶಾಕ್ ನೀಡಿದೆ. ಸರ್ಕಾರದ ಆದೇಶದ ಮೇರೆಗೆ ಗೂಗಲ್ ಸಂಸ್ಥೆಯು ತನ್ನ ‘ಪ್ಲೇ ಸ್ಟೋರ್’ನಿಂದ (Play Store) ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಿದೆ (Delist). ಮೂಲಗಳ ಪ್ರಕಾರ, ಆಪಲ್ ಸಂಸ್ಥೆ ಕೂಡ ಮುಂದಿನ ಕೆಲವು ಗಂಟೆಗಳಲ್ಲಿ ತನ್ನ ‘ಆ್ಯಪ್ ಸ್ಟೋರ್’ನಿಂದ (App Store) ಇದನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ.
ಜೂನ್ 21 ರಂದು ದೇಶಾದ್ಯಂತ ನಡೆಯಲಿರುವ NEET (UG) 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿಗಳು ಮತ್ತು ವಂಚನೆ ಜಾಲಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನೀಡಿದ ಶಿಫಾರಸಿನ ಮೇರೆಗೆ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69A ಅಡಿಯಲ್ಲಿ ಜೂನ್ 22 ರವರೆಗೆ ಟೆಲಿಗ್ರಾಂ ಆ್ಯಪ್ ಬಳಕೆಯನ್ನು ನಿರ್ಬಂಧಿಸಲು ಆದೇಶಿಸಿದೆ.
ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಸುಳ್ಳು ಪುರಾವೆಗಳನ್ನು ಸೃಷ್ಟಿಸಲು ಟೆಲಿಗ್ರಾಂನಲ್ಲಿರುವ ‘ಮೆಸೇಜ್ ಎಡಿಟಿಂಗ್’ (Message Editing) ಆಪ್ಷನ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ ಹೊಸ ಪ್ರಶ್ನೆ ಪತ್ರಿಕೆಗಳನ್ನು ಅಟ್ಯಾಚ್ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಾಗುತ್ತಿತ್ತು. ಇದನ್ನು ತಡೆಯಲು, ಜೂನ್ 30 ರವರೆಗೆ ಭಾರತದಲ್ಲಿ ಮೆಸೇಜ್ ಎಡಿಟ್ ಮಾಡುವ ಫೀಚರ್ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವಂತೆ ಟೆಲಿಗ್ರಾಂ ಸಂಸ್ಥೆಗೆ ಸರ್ಕಾರ ಸೂಚಿಸಿದೆ.
ಸದ್ಯಕ್ಕೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸದಾಗಿ ಆ್ಯಪ್ ಡೌನ್‌ಲೋಡ್ ಮಾಡಲು ಪ್ರಯತ್ನಿಸುವ ಆಂಡ್ರಾಯ್ಡ್ ಬಳಕೆದಾರರಿಗೆ ಟೆಲಿಗ್ರಾಂ ಲಭ್ಯವಿರುವುದಿಲ್ಲ. ಆದರೆ, ಈಗಾಗಲೇ ಮೊಬೈಲ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿರುವ ಅಸ್ತಿತ್ವದಲ್ಲಿರುವ ಬಳಕೆದಾರರ ಮೇಲೆ ಇದು ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.
ನೀಟ್ ಪರೀಕ್ಷೆಯ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಪರೀಕ್ಷೆಯ ಪಾರದರ್ಶಕತೆಯನ್ನು ಕಾಪಾಡಲು ಈ ಕಠಿಣ ಹೆಜ್ಜೆ ಅನಿವಾರ್ಯವಾಗಿತ್ತು ಎಂದಿದೆ. ಶೈಕ್ಷಣಿಕ ಹಾಗೂ ವೃತ್ತಿಪರ ಕಾರಣಗಳಿಗಾಗಿ ಟೆಲಿಗ್ರಾಂ ಬಳಸುತ್ತಿದ್ದ ಲಕ್ಷಾಂತರ ಜನರಿಗೆ ಇದರಿಂದಾಗಿರುವ ತಾತ್ಕಾಲಿಕ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದೆ.
ಜೂನ್ 22 ರಂದು ಪರೀಕ್ಷೆ ಮುಗಿದ ತಕ್ಷಣವೇ ಈ ತಾತ್ಕಾಲಿಕ ನಿಷೇಧವನ್ನು ಹಿಂಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.








