ನವದೆಹಲಿ: ಭಾರತವನ್ನು 2047ರ ವೇಳೆಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಕೇವಲ ಘೋಷಣೆಯಲ್ಲ, ಅದು ನಮ್ಮ ಸರ್ಕಾರದ ದೃಢವಾದ ಬದ್ಧತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಕೇಂದ್ರ ಮಂತ್ರಿ ಪರಿಷತ್ತಿನ (Council of Ministers) ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಆಡಳಿತ ಸುಧಾರಣೆ ಮತ್ತು ನಾಗರಿಕರ ‘ಸುಲಭ ಜೀವನ’ (Ease of Living) ಪ್ರಕ್ರಿಯೆಯನ್ನು ಮೇಲ್ದರ್ಜೆಗೆರಿಸುವ ಕುರಿತು ಪ್ರಮುಖ ಮಾರ್ಗದರ್ಶನ ನೀಡಿದರು.
ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಮತ್ತಷ್ಟು ಕ್ರಾಂತಿಕಾರಿ ಸುಧಾರಣೆಗಳನ್ನು ತರಲಾಗುವುದು. ಪ್ರತಿಯೊಂದು ಸಚಿವಾಲಯವೂ ಕಾಲಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಸೂಚಿಸಿದರು.
ನಾಗರಿಕರ ಸುಲಭ ಜೀವನ (Ease of Living): ಸರ್ಕಾರದ ಯೋಜನೆಗಳು ಮತ್ತು ಸೇವೆಗಳು ಸಾಮಾನ್ಯ ಜನರಿಗೆ ಯಾವುದೇ ಅಡೆತಡೆಯಿಲ್ಲದೆ ತಲುಪಬೇಕು. ದಿನನಿತ್ಯದ ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುವ ಮೂಲಕ ನಾಗರಿಕರ ಜೀವನವನ್ನು ಮತ್ತಷ್ಟು ಸುಲಭಗೊಳಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಸಚಿವರಿಗೆ ತಿಳಿಸಿದರು.
ಸ್ವಾತಂತ್ರ್ಯ ಬಂದು 100 ವರ್ಷ ತುಂಬುವ ವೇಳೆಗೆ (2047) ಭಾರತವನ್ನು ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ದೇಶವನ್ನಾಗಿ ರೂಪಿಸಲು ಸಿದ್ಧಪಡಿಸಲಾಗಿರುವ ದೀರ್ಘಕಾಲದ ಮುನ್ನೋಟದ (Vision Document) ಪ್ರಗತಿಯನ್ನು ಸಭೆಯಲ್ಲಿ ಪರಾಮರ್ಶಿಸಲಾಯಿತು.








