ಬೆಂಗಳೂರು: ರಾಜ್ಯದಲ್ಲಿ ಮುಂಬರುವ 2027ರ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ, ಜನಗಣತಿ ಕಾರ್ಯಗಳಿಗಾಗಿ ನೇಮಕಗೊಂಡಿರುವ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಯನ್ನು 2027ರ ಮಾರ್ಚ್ 31ರವರೆಗೆ ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಜಿ.ಕೆ. ನರಸಿಂಹಮೂರ್ತಿ ಅವರು ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಅಧಿಕೃತ ಸುತ್ತೋಲೆ ರವಾನಿಸಿದ್ದಾರೆ.
ಎರಡು ಹಂತಗಳಲ್ಲಿ ಜನಗಣತಿ ಪ್ರಕ್ರಿಯೆ:
ಕೇಂದ್ರ ಗೃಹ ಸಚಿವಾಲಯದ ಸೂಚನೆಯನ್ವಯ, 1948ರ ಜನಗಣತಿ ಕಾಯ್ದೆ ಹಾಗೂ 1990ರ ಜನಗಣತಿ ನಿಯಮಗಳ ಅಡಿಯಲ್ಲಿ 2027ರ ಜನಗಣತಿಯನ್ನು ಎರಡು ಪ್ರಮುಖ ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಮೊದಲ ಹಂತ (ಮನೆಗಳ ಪಟ್ಟಿ ಮತ್ತು ಮನೆ ಗಣತಿ – HLO): ಈಗಾಗಲೇ ಏಪ್ರಿಲ್ 1, 2026 ರಿಂದ ಏಪ್ರಿಲ್ 15, 2026 ರವರೆಗೆ ಸ್ವಯಂ ನೋಂದಣಿ (Self-Enrollment) ಪ್ರಕ್ರಿಯೆ ಹಾಗೂ ಏಪ್ರಿಲ್ 16, 2026 ರಿಂದ ಮೇ 15, 2026 ರವರೆಗೆ ಗಣತಿದಾರರಿಂದ ಮನೆಗಳ ಪಟ್ಟಿ ಮಾಡುವ ಕಾರ್ಯಕ್ಕೆ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಕೈಗೊಳ್ಳಲಾಗಿದೆ.
2ನೇ ಹಂತ (ಜನಸಂಖ್ಯೆ ಗಣತಿ – PE): ಜನಸಂಖ್ಯೆ ಗಣತಿಯ (Population Enumeration) ಅಂತಿಮ ಪ್ರಕ್ರಿಯೆಯು 2027ರ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ.
ವರ್ಗಾವಣೆಗೆ ನಿಷೇಧ ಏಕೆ?
ರಾಜ್ಯ, ಜಿಲ್ಲೆ, ತಾಲೂಕು ಮತ್ತು ಬ್ಲಾಕ್ ಮಟ್ಟದಲ್ಲಿ ಜನಗಣತಿ ಕಾರ್ಯಗಳಿಗಾಗಿ ಈಗಾಗಲೇ ಅಧಿಕಾರಿಗಳನ್ನು ನೇಮಿಸಿ, ಅವರಿಗೆ ಸೂಕ್ತ ತರಬೇತಿಯನ್ನು ಕೂಡ ನೀಡಲಾಗಿದೆ. ಈ ಅಧಿಕಾರಿಗಳು ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಬೇಕಿರುವುದರಿಂದ, ಮಧ್ಯದಲ್ಲಿ ಇವರನ್ನು ವರ್ಗಾವಣೆ ಮಾಡುವುದರಿಂದ ಜನಗಣತಿ ಕಾರ್ಯಕ್ಕೆ ಹಿನ್ನಡೆಯಾಗಬಹುದು. ಈ ಹಿನ್ನೆಲೆಯಲ್ಲಿ 2027ರ ಮಾರ್ಚ್ 31ರವರೆಗೆ ಇವರ ವರ್ಗಾವಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
3 ದಿನಗಳಲ್ಲಿ ಮಾಹಿತಿ ನೀಡಲು ಗಡುವು:
ಜನಗಣತಿ ಕಾರ್ಯಕ್ಕಾಗಿ ತರಬೇತಿ ಪಡೆದು ನಿಯೋಜನೆಗೊಂಡಿರುವ ಅಧಿಕಾರಿಗಳ ಇಲಾಖಾವಾರು ಮಾಹಿತಿಯನ್ನು ಸರ್ಕಾರ ಒದಗಿಸಿರುವ Google Spread Sheet ಲಿಂಕ್ನಲ್ಲಿ 03 ದಿನಗಳ ಒಳಗಾಗಿ ಕಡ್ಡಾಯವಾಗಿ ಅಪ್ಲೋಡ್ ಮಾಡುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.









