ಗ್ರೇಟರ್ ನೋಯ್ಡಾದ ಒಂದೇ ಕುಟುಂಬದ ಐದು ಮಂದಿ ಭಾನುವಾರ ರಾತ್ರಿ ಉತ್ತರ ಪ್ರದೇಶದ ಹಾಪುರ್‌ನಲ್ಲಿ ಗೂಗಲ್ ಮ್ಯಾಪ್ ಅನುಸರಿಸಿಕೊಂಡು ಹೋಗುತ್ತಿದ್ದಾಗ ಅವರ ಕಾರು ಚರಂಡಿಗೆ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಧಾವಿಸಿ ಅವರನ್ನು ರಕ್ಷಿಸಿದ್ದರಿಂದ ಭಾರಿ ಅನಾಹುತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಗೂಗಲ್ ಮ್ಯಾಪ್‌ನ ಸೂಚನೆಗಳನ್ನು ಪಾಲಿಸುತ್ತಿದ್ದಾಗ, ತಾವು ತಲುಪಬೇಕಾದ ಸ್ಥಳಕ್ಕೆ ಹೋಗಲು ತಪ್ಪು ಮಾರ್ಗವನ್ನು ಹಿಡಿದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
’ಡಯಲ್ 112′ ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣವೇ ಸ್ಪಂದಿಸಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರನ್ನು — ಮೂವರು ಪುರುಷರು, ಒಬ್ಬ ಮಹಿಳೆ ಮತ್ತು 6 ತಿಂಗಳ ಮಗುವನ್ನು — ಅಗ್ನಿಶಾಮಕ ಸಿಬ್ಬಂದಿ ಹೊರಕ್ಕೆ ಎಳೆದಿದ್ದಾರೆ. “ಇಡೀ ಕಾರ್ಯಾಚರಣೆಯ ಉದ್ದಕ್ಕೂ ಕುಟುಂಬದ ಯಾರಿಗೂ ಗಾಯವಾಗದಂತೆ ಸುರಕ್ಷಿತವಾಗಿ ಹೊರತರಲು ಸುಮಾರು ಎರಡು ಗಂಟೆಗಳ ಸಮಯ ಹಿಡಿಯಿತು,” ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ (CFO) ಅಜಯ್ ಶರ್ಮಾ ತಿಳಿಸಿದ್ದಾರೆ.
ಶರ್ಮಾ ಅವರು ಮಾತನಾಡಿ, ಈ ಕುಟುಂಬವು ಗ್ರೇಟರ್ ನೋಯ್ಡಾದ ದಾದ್ರಿ ಪ್ರದೇಶದಲ್ಲಿದ್ದ ತಮ್ಮ ಮನೆಯಿಂದ ಮೀರತ್‌ನ ಕಿಥೋರ್ ಪ್ರದೇಶಕ್ಕೆ ಹೊರಟಿತ್ತು. ಸಾಹಿಲ್ ಎಂಬ ವ್ಯಕ್ತಿ ಕಾರು ಚಲಾಯಿಸುತ್ತಿದ್ದು, ದಾರಿ ತಿಳಿಯಲು ಗೂಗಲ್ ಮ್ಯಾಪ್ ಸಂಪರ್ಕಿಸಿಕೊಂಡಿದ್ದ ಎಂದು ಹೇಳಿದರು.
ಹಾಪುರ್ ಮೂಲಕ ಹಾದುಹೋಗುವಾಗ, ಆತ ಶ್ಯಾಮ್ ನಗರ ಪ್ರದೇಶದ ರಸ್ತೆಯಲ್ಲಿ ವಾಹನ ಚಲಾಯಿಸಿದ್ದಾನೆ.
ರಕ್ಷಣಾ ತಂಡದ ಐದು ಮಂದಿ ಸದಸ್ಯರಲ್ಲಿ ಒಬ್ಬರಾದ ಅಗ್ನಿಶಾಮಕ ಸಿಬ್ಬಂದಿ ಸುಧೀರ್ ಕುಮಾರ್ ಮಾಹಿತಿ ನೀಡಿ, ಸಾಹಿಲ್ ಇಲ್ಲಿ ತಪ್ಪು ಮಾರ್ಗವನ್ನು ಆಯ್ದುಕೊಂಡಂತೆ ತೋರುತ್ತಿದೆ ಮತ್ತು ರೈಲ್ವೆ ಮೇಲ್ಸೇತುವೆಯ ಪಕ್ಕದಲ್ಲಿ ಹಾದುಹೋಗುವ ಕಿರಿದಾದ ರಸ್ತೆಗೆ ಬಂದಿದ್ದಾರೆ ಎಂದಿದ್ದಾರೆ.
ಈ ರಸ್ತೆಯು ಸಾಮಾನ್ಯವಾಗಿ ವಾಹನ ಸವಾರರು ಬಳಸುವ ರಸ್ತೆಯಲ್ಲ, ಕೇವಲ ಸ್ಥಳೀಯರು ಶಾರ್ಟ್‌ಕಟ್ ಆಗಿ ಬಳಸುತ್ತಾರೆ ಎಂದು ಅವರು ಹೇಳಿದರು. ರಸ್ತೆಯ ಪಕ್ಕದಲ್ಲಿ ಚರಂಡಿ ಇರುವುದು ಸ್ಥಳೀಯರಿಗೆ ತಿಳಿದಿದೆ ಮತ್ತು ಸಾಮಾನ್ಯವಾಗಿ ಅವರು ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ಮಾತ್ರ ಕೊಂಡೊಯ್ಯುತ್ತಾರೆ ಎಂದು ಕುಮಾರ್ ತಿಳಿಸಿದರು.
ಭಾನುವಾರ ಈ ರಸ್ತೆಯಲ್ಲಿ ನೀರು ನಿಂತಿದ್ದು, ಚರಂಡಿಯೂ ಸಹ ಸಂಪೂರ್ಣವಾಗಿ ತುಂಬಿ ಹರಿಯುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಮಾರ್ ಅವರು ಮುಂದುವರಿದು ಮಾತನಾಡಿ, ಚಾಲಕನು ಹ್ಯಾಚ್‌ಬ್ಯಾಕ್ ಕಾರನ್ನು ಆ ರಸ್ತೆಗೆ ಇಳಿಸಿ, ಅದರ ಮೂಲಕ ಚಲಾಯಿಸಲು ಯತ್ನಿಸಿದಾಗ, ರಾತ್ರಿ ಸುಮಾರು 10 ಗಂಟೆಗೆ ವಾಹನವು ಮೊಣಕಾಲಿನಷ್ಟು ಆಳವಿದ್ದ ಚರಂಡಿಗೆ ಜಾರಿ ಬಿದ್ದಿದೆ ಎಂದಿದ್ದಾರೆ.
”ಕಾರನ್ನು ಹೊರಗೆ ತೆಗೆಯಲು ಚಾಲಕ ಪ್ರಯತ್ನಿಸುತ್ತಿದ್ದಾಗ, ಇಡೀ ಕಾರು ಚರಂಡಿಯೊಳಗೆ ಸರಿಯಿತು. ಒಳಗಿನ ಪ್ರದೇಶವು ಕೆಸರಿನಿಂದ ಕೂಡಿದ್ದರಿಂದ ಕಾರಿನ ಚಕ್ರಗಳು ಸಿಲುಕಿಕೊಂಡವು,” ಎಂದು ಹೇಳಿದ ಅಗ್ನಿಶಾಮಕ ಸಿಬ್ಬಂದಿ, ಕಾರಿನಲ್ಲಿದ್ದವರಿಗೆ ಬಾಗಿಲುಗಳನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಕಾರಿನಲ್ಲಿದ್ದವರ ಪೈಕಿ ಒಬ್ಬರು ತಕ್ಷಣವೇ ಪೊಲೀಸ್ ಸಹಾಯವಾಣಿ ‘112’ ಕ್ಕೆ ಕರೆ ಮಾಡಿದರು ಮತ್ತು ಅವರು ಹಾಪುರ್ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಿದರು ಎಂದು ಅವರು ವಿವರಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ:
ಲೀಡಿಂಗ್ ಫೈರ್‌ಮ್ಯಾನ್ ನರೇಂದ್ರ ಸಿಂಗ್ ನೇತೃತ್ವದ ಐದು ಮಂದಿ ಸಿಬ್ಬಂದಿಯ ತಂಡ ಸ್ಥಳಕ್ಕೆ ಧಾವಿಸಿತು. “ರಸ್ತೆ ತುಂಬಾ ಕಿರಿದಾಗಿದ್ದರಿಂದ ನಮಗೆ ಅಗ್ನಿಶಾಮಕ ವಾಹನವನ್ನು (ಫೈರ್ ಟೆಂಡರ್) ಒಳಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಅಗ್ನಿಶಾಮಕ ವಾಹನವನ್ನು ರಸ್ತೆಯಲ್ಲೇ ಬಿಟ್ಟು, ನಮ್ಮ ಉಪಕರಣಗಳನ್ನು ಕೈಯಲ್ಲಿ ಹಿಡಿದುಕೊಂಡು 800 ಮೀಟರ್ ದೂರ ನಡೆದುಕೊಂಡು ಹೋದೆವು,” ಎಂದು ಕುಮಾರ್ ಹೇಳಿದರು.
ತಮ್ಮ ರಕ್ಷಣಾ ಪ್ರಯತ್ನಗಳನ್ನು ವಿವರಿಸಿದ ಕುಮಾರ್, “ನಾವು ಚಕ್ರಗಳ ಕೆಳಗೆ ಇಟ್ಟಿಗೆಗಳನ್ನು ಇಡುವ ಮೂಲಕ ಮತ್ತು ಚರಂಡಿಯ ಬದಿಗಳನ್ನು ಅಗೆಯುವ ಮೂಲಕ ಕಾರನ್ನು ಮುಕ್ತಗೊಳಿಸಲು ಪ್ರಯತ್ನಿಸಿದೆವು. ಕೊನೆಗೆ ನಾವೇ ಸ್ವತಃ ಚರಂಡಿಗೆ ಇಳಿದು, ವಾಹನವನ್ನು ಹಿಂಭಾಗದಿಂದ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾದೆವು,” ಎಂದರು.
ನಂತರ, ಅವರು ವಾಹನವನ್ನು ಹೊರಕ್ಕೆ ಎಳೆಯಲು ಟ್ರ್ಯಾಕ್ಟರ್ ಒಂದನ್ನು ಕರೆಸಿದರು. ಅಷ್ಟರಲ್ಲಾಗಲೇ ಮಧ್ಯರಾತ್ರಿ ತಲುಪಿತ್ತು ಎಂದು ಕುಮಾರ್ ಹೇಳಿದರು.
ಈ ನಡುವೆ, ಕುಟುಂಬದವರು ತಮ್ಮ ಪರಿಚಯಸ್ಥರಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಬಂದು ಇವರನ್ನು ಪಿಕಪ್ ಮಾಡಿಕೊಂಡು ಹೋದರು ಎಂದು ಅವರು ತಿಳಿಸಿದರು.
ಅಗ್ನಿಶಾಮಕ ತಂಡದಲ್ಲಿದ್ದ ಇತರ ಸಿಬ್ಬಂದಿಗಳೆಂದರೆ ಜಸ್ವಂತ್ ಸಿಂಗ್ ಮತ್ತು ಚಂದ್ರವೀರ್ ಸಿಂಗ್ ಹಾಗೂ ಚಾಲಕ ಪ್ರವೀಣ್ ಸಿಂಗ್.








