ವಾಷಿಂಗ್ಟನ್: ಶನಿವಾರ ರಾತ್ರಿ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಶೂಟರ್‌ನ ಮೊದಲ ಚಿತ್ರಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಡುಗಡೆ ಮಾಡಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಶಂಕಿತ ವ್ಯಕ್ತಿಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ಭದ್ರತಾ ಲೋಪದ ಕುರಿತು ಮತ್ತಷ್ಟು ಮಾಹಿತಿಯನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದಾರೆ.
ಚಿತ್ರದಲ್ಲಿ ಶಂಕಿತ ವ್ಯಕ್ತಿಯನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ನೆಲಕ್ಕೆ ಕೆಡವಿ ಬಂಧಿಸುತ್ತಿರುವುದನ್ನು ಕಾಣಬಹುದು. ಶೂಟರ್ ಸುಮಾರು 20 ರಿಂದ 25 ವರ್ಷದ ಯುವಕನಂತೆ ಕಾಣುತ್ತಿದ್ದಾನೆ ಎಂದು ವರದಿಯಾಗಿದೆ.
ಶೂಟರ್ ಬಳಸಿದ್ದ ಎನ್ನಲಾದ ಸಣ್ಣ ಪ್ರಮಾಣದ ಪಿಸ್ತೂಲ್ ಸಹ ಚಿತ್ರದಲ್ಲಿ ಕಂಡುಬಂದಿದೆ. ಆತ ಹೋಟೆಲ್‌ನ ಭದ್ರತಾ ತಪಾಸಣೆಯನ್ನು ಮೀರಿ ಒಳಗೆ ಹೇಗೆ ಬಂದ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಟ್ರಂಪ್ ಆಕ್ರೋಶ: ಫೋಟೋ ಹಂಚಿಕೊಂಡ ಟ್ರಂಪ್, “ನಮ್ಮ ಭದ್ರತಾ ಪಡೆಗಳು ಅತ್ಯಂತ ವೇಗವಾಗಿ ಈತನನ್ನು ಮಟ್ಟಹಾಕಿವೆ. ಇಂತಹ ವಿಧ್ವಂಸಕ ಕೃತ್ಯಗಳು ನನ್ನನ್ನು ಅಂಜಿಸಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ಬಂಧಿತ ವ್ಯಕ್ತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಎಫ್‌ಬಿಐ (FBI) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತ ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆಯೇ ಅಥವಾ ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿದ್ದಾನೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.








