ಬೆಂಗಳೂರು : ತಮ್ಮ ಸ್ನೇಹಿತೆ ವಿಚಾರವಾಗಿ ಇಬ್ಬರು ಗೆಳೆಯರ ನಡುವಿನ ಕಿತ್ತಾಟವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟಾಲಮ್ಮ ಲೇಔಟ್ ನಿವಾಸಿ ರಾಮಚಂದ್ರ (46) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಕೂಲಿ ಕಾರ್ಮಿಕ ಹರೀಶ್‌ನನ್ನು ಬಂಧಿಸಲಾಗಿದೆ. ತಮ್ಮ ಮನೆ ಹತ್ತಿರದಲ್ಲಿರುವ ಸ್ನೇಹಿತೆ ಮನೆಗೆ ಶುಕ್ರವಾರ ರಾತ್ರಿ ರಾಮಚಂದ್ರ ತೆರಳಿದ್ದಾಗ ಈ ಹತ್ಯೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರಾಮಚಂದ್ರ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಹಲವು ವರ್ಷಗಳಿಂದ ಕಾಡುಗೋಡಿ ಹತ್ತಿರದ ಪಟಾಲಮ್ಮ ಲೇಔಟ್‌ನಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಈರುಳ್ಳಿ ಮಾರಾಟ ಮಳಿಗೆಯಲ್ಲಿ ಲಾರಿ ಚಾಲಕನಾಗಿದ್ದ ಆತನಿಗೆ ಅದೇ ಮಳಿಗೆಯ ಕೆಲಸ ಮಾಡುತ್ತಿದ್ದ ಮಹಿಳೆ ಪರಿಚಯವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತೊರೆದು ಆಕೆ ಏಕಾಂಗಿಯಾಗಿ ವಾಸವಾಗಿದ್ದಳು.
ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ, ವ್ಯಾಪಾರಕ್ಕೆಂದು ಬೆಂಗಳೂರಿಗೆ ಬರುತ್ತಿದ್ದ. ಆ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿಗೆ ಮಹಿಳೆಯೊಬ್ಬರ ಪರಿಚಯವಾಗಿದ್ದು, ಬಳಿಕ ಇಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಹೀಗಾಗಿ ಬೆಂಗಳೂರಿಗೆ ಬಂದಾಗೆಲ್ಲ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದ. ಈ ನಡುವೆ ಮಹಿಳೆಗೆ ಹರೀಶ್ ಎಂಬಾತನ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪ್ರೀತಿ ಕೂಡ ಶುರು ಆಗಿದೆ. ಆದ್ರೆ ಇತ್ತೀಚೆಗೆ ರಾಮಚಂದ್ರ ರೆಡ್ಡಿ ಬಂದು ಹೋಗುವುದು ಹರೀಶ್ ಗೆ ಗೊತ್ತಾಗಿದ್ದು, ಪ್ರೇಯಸಿಯ ಸಂಬಂಧವನ್ನ ಸಹಿಸದೆ ಆಕ್ರೋಶಗೊಂಡಿದ್ದ.
ಅಲ್ಲದೇ ಇದಕ್ಕೆ ಅಂತ್ಯಹಾಡಬೇಕೆಂದು ಪ್ಲ್ಯಾನ್ ಮಾಡಿದ್ದ.ಈ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿ ಸಹ ನಿನ್ನೆ (ಏಪ್ರಿಲ್ 25) ಮಹಿಳೆಯ ಮನೆಗೆ ಬಂದಿದ್ದು, ಬಳಿಕ ಅಲ್ಲೇ ಇದ್ದ ದೇವಸ್ಥಾನವೊಂದರ ಬಳಿ ಮಲಗಿದ್ದ. ಇದೇ ಸಮಯಕ್ಕೆ ಮಹಿಳೆಯ ಪ್ರಿಯಕರ ಹರೀಶ್ ಬಂದು ರಾಮಚಂದ್ರ ರೆಡ್ಡಿ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು, ಹಂತಕ ಹರೀಶ್‌ನನ್ನು ಬಂಧಿಸಿದ್ದಾರೆ.








