ಬೆಂಗಳೂರು : ಇಂಧನ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಹಾಗೂ ಖಾತೆ ಹಂಚಿಕೆ ಕುರಿತು ಅಸಮಾಧಾನ ಇಲ್ಲ ಎಂದಿರುವ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಈ ಕುರಿತ ವರದಿಗಳು ಆಧಾರ ರಹಿತ ಎಂದು ಗುರುವಾರ ಹೇಳಿದ್ದಾರೆ.
ಈ ಕುರಿತ ಊಹಾಪೋಹಗಳನ್ನು ತಳ್ಳಿಹಾಕಿರುವ ಸಚಿವ ಜಾರ್ಜ್, “ಖಾತೆ ಹಂಚಿಕೆ ಹಾಗೂ ಆಡಳಿತಾತ್ಮಕ ನೇಮಕಾತಿಗಳ ಬಗ್ಗೆ ನನಗೆ ಅಸಮಾಧಾನ ಇದೆ ಎಂದು ಕೆಲ ಮಾಧ್ಯಮಗಳ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾದುದು. ಈ ರೀತಿಯ ವದಂತಿಗಳು ಜನರನ್ನು ದಾರಿ ತಪ್ಪಿಸುವಂಥದ್ದು,”ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ಪುನರುಚ್ಛರಿಸಿರುವ ಜಾರ್ಜ್, “ಖಾತೆ ಹಂಚಿಕೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಆಡಳಿತಾತ್ಮಕ ನೇಮಕಾತಿಗಳ ಬಗ್ಗೆಯೂ ತಕರಾರಿಲ್ಲ. ಈ ಕುರಿತ ವರದಿಗಳು ಸತ್ಯಕ್ಕೆ ದೂರವಾದವು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸುವ ಮೂಲಕ ಕರ್ನಾಟಕದ ಜನರಿಗೆ ಸೇವೆ ಸಲ್ಲಿಸುವುದು ನನ್ನ ಆದ್ಯ ಕರ್ತವ್ಯ”ಎಂದಿದ್ದಾರೆ.
ಇದೇ ಜೂನ್ 4ರಂದು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಕೆ.ಜೆ. ಜಾರ್ಜ್ ಅವರು ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೇ, ಅಧಿಕಾರ ಹಸ್ತಾಂತರದ ಪ್ರಕ್ರಿಯೆಯಲ್ಲೂ ಜಾರ್ಜ್ ಅವರು ಜವಾಬ್ದಾರಿಯುತ ಪಾತ್ರ ನಿರ್ವಹಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.








