ನವದೆಹಲಿ: ಆಸ್ಪತ್ರೆಗಳಲ್ಲಿನ ತೀವ್ರ ನಿಗಾ ಘಟಕಗಳಲ್ಲಿ (ICU) ರೋಗಿಗಳನ್ನು ಅನಗತ್ಯವಾಗಿ ದೀರ್ಘಕಾಲ ಇರಿಸುವುದನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಐಸಿಯು ದಾಖಲಾತಿ ಮತ್ತು ಬಿಡುಗಡೆಗೆ (Admission & Discharge) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಏಕರೂಪದ ಮಾರ್ಗಸೂಚಿಗಳನ್ನು ಅನುಮೋದಿಸಿರುವ ನ್ಯಾಯಾಲಯ, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಅನಗತ್ಯ ವಾಸ್ತವ್ಯಕ್ಕೆ ಕಡಿವಾಣ: ರೋಗಿಯ ಸ್ಥಿತಿ ಸುಧಾರಿಸಿದ ನಂತರವೂ ಅಥವಾ ಯಾವುದೇ ಪ್ರಾಣಾಪಾಯ ಇಲ್ಲದಿದ್ದರೂ ಐಸಿಯುನಲ್ಲಿ ಇರಿಸುವಂತಿಲ್ಲ. ರೋಗಿ ಸ್ಥಿರಗೊಂಡ ತಕ್ಷಣ ಅವರನ್ನು ವಾರ್ಡ್‌ಗಳಿಗೆ ಸ್ಥಳಾಂತರಿಸಬೇಕು.
ರೋಗಿಯನ್ನು ಐಸಿಯುನಲ್ಲಿ ದಾಖಲಿಸುವ ಮೊದಲು ಅವರ ಕುಟುಂಬದವರಿಗೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅವರ ಒಪ್ಪಿಗೆ ಪಡೆಯುವುದು ಅವಶ್ಯಕ.
ಏಮ್ಸ್ (AIIMS) ವೈದ್ಯರು ಸೇರಿದಂತೆ ತಜ್ಞರ ಸಮಿತಿಯು ಸಿದ್ಧಪಡಿಸಿದ ಈ ಮಾರ್ಗಸೂಚಿಗಳು ಅತ್ಯಂತ ಪ್ರಾಯೋಗಿಕ ಮತ್ತು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಈ ನಿಯಮಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಮೇ 18ರೊಳಗೆ ವಿವರವಾದ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಗಡುವು ನೀಡಲಾಗಿದೆ.








