ಶಿವಮೊಗ್ಗ: ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದ್ದರೂ ನೈಜ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲತ್ತುಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಕೆ. ಸಂಜಯ್ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಹಣವನ್ನು ಅನಗತ್ಯ ಕಿಟ್‌ಗಳು ಹಾಗೂ ಟೆಂಡರ್‌ಗಳ ಮೂಲಕ ಬೇರೆಡೆಗೆ ಡೈವರ್ಟ್ ಮಾಡಲಾಗುತ್ತಿದೆ. ಮಂಡಳಿಯ ದುಡ್ಡು ಕಾರ್ಮಿಕರ ಹಿತಕ್ಕಾಗಿಯೇ ಬಳಕೆಯಾಗಬೇಕು ಮತ್ತು ಯಾವುದೇ ಕಾರಣಕ್ಕೂ ಇಲಾಖೆಯಲ್ಲಿ ಖಾಸಗೀಕರಣ ಬೇಡ ಎಂಬ ಉದ್ದೇಶದಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅವರು ಪ್ರಸ್ತಾಪಿಸಿದ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
ತರಬೇತಿ ಹೆಸರಿನಲ್ಲಿ ಕಣ್ಣೊರೆಸುವ ತಂತ್ರ
- ಇಲಾಖೆಯಿಂದ ನೀಡಲಾಗುತ್ತಿರುವ ಆರ್‌ಪಿಎಲ್ (RPL) ತರಬೇತಿ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ತರಬೇತಿ ನೀಡುವವರಿಗೇ ಸರಿಯಾದ ಮಾಹಿತಿ ಇಲ್ಲ.
- ನೈಜ ಕಾರ್ಮಿಕರನ್ನು ಕೇವಲ ಅರ್ಧ ಗಂಟೆ ಕೂರಿಸಿ, ಸಹಿ ಹಾಗೂ ಫೋಟೋ ಪಡೆದು ಕಳುಹಿಸಲಾಗುತ್ತಿದೆ. ಮೇಸ್ತ್ರಿ, ಕಾರ್ಪೆಂಟರ್, ಪ್ಲಂಬರ್, ಎಲೆಕ್ಟ್ರಿಷಿಯನ್ ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ವೃತ್ತಿಪರ ತರಬೇತಿ ನೀಡುವ ಬದಲು, ಎಲ್ಲರನ್ನೂ ಒಟ್ಟಿಗೆ ಸೇರಿಸಿ ಧನಗಳ ತರಹ ಮುಟ್ಟುವುದಲ್ಲದೇ ಒಂದೇ ರೀತಿಯ ಮೇಸ್ತ್ರಿ ಸರ್ಟಿಫಿಕೇಟ್ ನೀಡಲಾಗುತ್ತಿದೆ.
- 10 ದಿನಗಳ ತರಬೇತಿಗೆ ನೀಡಬೇಕಾಗಿದ್ದ ತಲಾ 2,000 ರೂ. ಭತ್ಯೆ (ದಿನಕ್ಕೆ 200 ರೂ.) ಕೂಡಾ ತರಬೇತಿ ಮುಗಿಸಿದ ಹಲವು ಕಾರ್ಮಿಕರಿಗೆ ಇನ್ನೂ ತಲುಪಿಲ್ಲ.
ಟೂಲ್ ಕಿಟ್ ಹೆಸರಿನಲ್ಲಿ ಕೋಟ್ಯಂತರ ರೂ. ಹಗರಣ
- ಸರ್ಕಾರವು ಕಾರ್ಮಿಕರ ಸುರಕ್ಷತಾ ಕಿಟ್‌ಗಾಗಿ ಪ್ರತಿ ಕಿಟ್‌ಗೆ 2,700 ರೂ. ಹಣ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿರುವ ಎರಡು ಜಾಕೆಟ್, ಗ್ಲೌಸ್, ಹ್ಯಾಟ್ ಹಾಗೂ ಒಂದು ಬ್ಯಾಗ್‌ನ ನೈಜ ಮಾರುಕಟ್ಟೆ ಬೆಲೆ ಬೆಂಗಳೂರಿನಲ್ಲಿ ಕೇವಲ 600 ರಿಂದ 700 ರೂ. ಮಾತ್ರ ಇರುತ್ತದೆ.
- ಗುಣಮಟ್ಟವಿಲ್ಲದ ಈ ಕಿಟ್‌ಗಳನ್ನು ಯಾವುದೇ ಕಾರ್ಮಿಕರು ಕೆಲಸದ ವೇಳೆ ಬಳಸುತ್ತಿಲ್ಲ. ಆದ್ದರಿಂದ ಇಂತಹ ಕಿಟ್‌ಗಳನ್ನು ಕೊಡುವುದನ್ನು ತಕ್ಷಣ ನಿಲ್ಲಿಸಬೇಕು. ಆ ಹಣವನ್ನು ಕಳೆದ 3-4 ವರ್ಷಗಳಿಂದ ನಿಂತುಹೋಗಿರುವ ಕಾರ್ಮಿಕರ ಮಕ್ಕಳ ಕಾಲೇಜು ವಿದ್ಯಾರ್ಥಿವೇತನಕ್ಕೆ (Scholarship) ಬಳಸಬೇಕು.
ಮದುವೆ ಸಹಾಯಧನ ಕಡಿತಕ್ಕೆ ತೀವ್ರ ವಿರೋಧ
- ಕಾರ್ಮಿಕರ ಮಕ್ಕಳ ಮದುವೆಗೆ ನೀಡಲಾಗುತ್ತಿದ್ದ 50,000 ರೂ. ಸಹಾಯಧನವನ್ನು ನಿಲ್ಲಿಸಲು ಸರ್ಕಾರ ಇತ್ತೀಚೆಗೆ ಚರ್ಚೆ ನಡೆಸುತ್ತಿರುವುದು ಖಂಡನೀಯ. ಇದನ್ನು ನಿಲ್ಲಿಸುವ ಬದಲು ಸಹಾಯಧನವನ್ನು ಮತ್ತಷ್ಟು ಹೆಚ್ಚಿಸಬೇಕು. ಒಂದು ವೇಳೆ ನಿಲ್ಲಿಸಿದರೆ ಒಕ್ಕೂಟದಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ.
ಸಂಚಾರಿ ಆರೋಗ್ಯ ಘಟಕದ ಹೆಸರಿನಲ್ಲಿ ಲೂಟಿ
- ಸಂಚಾರಿ ವೈದ್ಯಕೀಯ ಘಟಕಗಳ (Mobile Medical Units) ಮೂಲಕ ಒಬ್ಬ ಕಾರ್ಮಿಕನ ಆರೋಗ್ಯ ತಪಾಸಣೆಗೆ ಸರ್ಕಾರ 2,950 ರೂ. ವೆಚ್ಚ ಮಾಡುತ್ತಿದೆ. ಆದರೆ ಕಾರ್ಮಿಕರಿಗೆ ಯಾವುದೇ ಸರಿಯಾದ ತಪಾಸಣೆ ಮಾಡದೇ, ಹಳೆಯ ರಿಪೋರ್ಟ್‌ಗಳನ್ನೇ ಬಳಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ತಪಾಸಣೆಯ ವರದಿಗಳು ಸಹ ತಿಂಗಳುಗಟ್ಟಲೆ ಬರುವುದಿಲ್ಲ.
- ಇದರ ಬದಲು ಕಾರ್ಮಿಕರು ಕಟ್ಟಡದಿಂದ ಬಿದ್ದಾಗ ಅಥವಾ ಕಾಯಿಲೆ ಬಂದಾಗ ನೆರವಾಗಲು ಇಎಸ್‌ಐ (ESI) ಮಾದರಿಯಲ್ಲಿ ‘ಕ್ಯಾಶ್‌ಲೆಸ್’ (ನಗದು ರಹಿತ) ಚಿಕಿತ್ಸಾ ಸೌಲಭ್ಯವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಈ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರೆಸ್ ಮೀಟ್ ಜಾಗೃತಿ ಹೋರಾಟವನ್ನು ಸಾಗರ ತಾಲೂಕಿನಿಂದಲೇ ಪ್ರಥಮವಾಗಿ ಆರಂಭಿಸಲಾಗಿದೆ ಎಂದು ಸಂಜಯ್ ಕುಮಾರ್ ಅವರು ಸ್ಪಷ್ಟಪಡಿಸಿದರು.

ಬೋಗಸ್ ಕಾರ್ಮಿಕ ಕಾರ್ಡ್ ಹಾವಳಿ ತಡೆಗೆ ಖಾಸಗೀಕರಣ ಕೈಬಿಡುವಂತೆ ಆಗ್ರಹ
ಇನ್ನೂ ಕಾರ್ಮಿಕ ಇಲಾಖೆಯಲ್ಲಿ ಬೋಗಸ್ ಕಾರ್ಡ್‌ಗಳ ಹಾವಳಿಯನ್ನು ತಡೆಗಟ್ಟಲು ಮತ್ತು ಅರ್ಹ ಕಾರ್ಮಿಕರಿಗೆ ಸೌಲಭ್ಯಗಳು ತಲುಪುವಂತೆ ಮಾಡಲು ಇಲಾಖೆಯ ಯಾವುದೇ ಪ್ರಕ್ರಿಯೆಗಳನ್ನು ಖಾಸಗೀಕರಣಗೊಳಿಸಬಾರದು ಎಂದು ಒತ್ತಾಯಿಸಿದರು.
ಬೋಗಸ್ ಕಾರ್ಡ್‌ಗಳ ಇತಿಹಾಸ ಮತ್ತು ಕೋವಿಡ್ ಹಗರಣ:
ಕಳೆದ 2017-18ರ ಅವಧಿಯಲ್ಲಿ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು ಮತ್ತು ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಕಾರ್ಡ್‌ಗಳನ್ನು ಮಾಡಿಸಲು ಖಾಸಗಿ ಟೆಂಡರ್ ನೀಡಲಾಗಿತ್ತು. ಆ ಸಂದರ್ಭದಲ್ಲಿ ಪ್ರತಿಯೊಂದು ಜಿಲ್ಲೆಗೆ ತಲಾ 1 ಲಕ್ಷ ಕಾರ್ಡ್‌ಗಳನ್ನು ಮಾಡುವ ಗುರಿ ನೀಡಲಾಗಿದ್ದು, ಇದರಿಂದಾಗಿ ಇಲಾಖೆಯಲ್ಲಿ ವ್ಯಾಪಕವಾಗಿ ಬೋಗಸ್ ಕಾರ್ಡ್‌ಗಳು ಸೃಷ್ಟಿಯಾಗಿದ್ದವು. ನಿಜವಾದ ಕಾರ್ಮಿಕರಲ್ಲದವರೂ ಸಹ ಕಾರ್ಮಿಕ ಕಾರ್ಡ್‌ಗಳನ್ನು ಪಡೆದುಕೊಂಡಿದ್ದರು ಎಂದರು.
ತದನಂತರ 2018-19ರಲ್ಲಿ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡಾಗ, ಸರ್ಕಾರವು ಕಾರ್ಮಿಕರ ನೆರವಿಗಾಗಿ ಘೋಷಿಸಿದ್ದ ₹3,000 ಮತ್ತು ₹5,000 ಧನಸಹಾಯವು ನಿಜವಾದ ಕಾರ್ಮಿಕರಿಗೆ ತಲುಪುವ ಬದಲಾಗಿ, ಖಾಸಗಿ ಟೆಂಡರ್ ಮೂಲಕ ಬೋಗಸ್ ಕಾರ್ಡ್ ಪಡೆದವರ ಪಾಲಾಯಿತು. ಇದರಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ದುರುಪಯೋಗವಾಗಿತ್ತು ಎಂಬುದಾಗಿ ಆರೋಪಿಸಿದರು.
ಸಂಘಟನೆಯ ಹೋರಾಟ ಮತ್ತು ಕಾರ್ಡ್‌ಗಳ ಸತ್ಯಾಸತ್ಯತೆ:
ಈ ಅವ್ಯವಸ್ಥೆಯ ವಿರುದ್ಧ ವಿವಿಧ ಸಂಘಟನೆಗಳು ನಿರಂತರ ಹೋರಾಟ ನಡೆಸಿದ ಫಲವಾಗಿ, ಸರ್ಕಾರವು ಬೋಗಸ್ ಕಾರ್ಡ್‌ಗಳ ವಿತರಣೆಗೆ ತಡೆ ನೀಡಿತ್ತು. ಇಲಾಖೆಯ ಅಧಿಕಾರಿಗಳು ಕಾರ್ಡ್‌ಗಳ ಪರಿಶೀಲನೆ ನಡೆಸಿದಾಗ ಸಾಗರ ವ್ಯಾಪ್ತಿಯಲ್ಲಿದ್ದ 24,000 ಕಾರ್ಡ್‌ಗಳ ಪೈಕಿ ಕೇವಲ 10 ರಿಂದ 12 ಸಾವಿರ ಕಾರ್ಡ್‌ಗಳು ಮಾತ್ರ ನಿಜವಾದ ಫಲಾನುಭವಿಗಳದ್ದಾಗಿವೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಉಳಿದ ಕಾರ್ಡ್‌ಗಳನ್ನು ಫಿಲ್ಟರ್ ಮಾಡಿ ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಮತ್ತೆ ಖಾಸಗೀಕರಣದ ಆತಂಕ:
ಆದರೆ, ಈಗ ಇಲಾಖೆಯು ಹಳೆಯ ತಪ್ಪುಗಳನ್ನೇ ಮರುಕಳಿಸುವಂತೆ ಮತ್ತೆ ಮನೆ ಮನೆಗೆ ಹೋಗಿ ಕಾರ್ಡ್ ಮಾಡಲು ಹಾಗೂ ಕಿಟ್‌ಗಳನ್ನು ವಿತರಿಸಲು ಖಾಸಗಿ ಸಂಸ್ಥೆಗಳಿಗೆ ಟೆಂಡರ್ ನೀಡಲು ಮುಂದಾಗಿದೆ. ಇಲಾಖೆಯನ್ನು ಬದಿಗಿಟ್ಟು ಖಾಸಗಿಯವರಿಗೆ ಟೆಂಡರ್ ನೀಡಿದರೆ ಪ್ರತಿ ಕಾರ್ಡ್‌ಗೆ ಇಂತಿಷ್ಟು ಕಮಿಷನ್ ದಂಧೆ ಶುರುವಾಗುತ್ತದೆ ಮತ್ತು ಮತ್ತೆ ಬೋಗಸ್ ಕಾರ್ಡ್‌ಗಳು ಹೆಚ್ಚಾಗುತ್ತವೆ. ಆದ್ದರಿಂದ ಕಾರ್ಡ್‌ಗಳ ಪರಿಶೀಲನೆ ಮತ್ತು ವಿತರಣೆಯ ಸಂಪೂರ್ಣ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಯೇ ವಹಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಕೆ.ಸಂಜಯ್ ಕುಮಾರ್ ಆಗ್ರಹಿಸಿದರು.
ಅಧಿಕಾರಿಗಳ ಕೊರತೆ ನೀಗಿಸಲು ಮನವಿ:
ಸಾಗರ ಉಪವಿಭಾಗದಲ್ಲಿ ಸದ್ಯ ಅಧಿಕಾರಿಗಳ ತೀವ್ರ ಕೊರತೆಯಿದೆ. ಸ್ವರ್ಬಾ, ಸಾಗರ ಮತ್ತು ಹೊಸನಗರ ಸೇರಿದಂತೆ ಮೂರು ತಾಲೂಕುಗಳಿಗೆ ಒಬ್ಬರೇ ಇನ್ಸ್‌ಪೆಕ್ಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬರೇ ಅಧಿಕಾರಿ ಮೂರು ತಾಲೂಕುಗಳನ್ನು ನಿಭಾಯಿಸುವುದು ಅಸಾಧ್ಯವಾಗಿದ್ದು, ತಕ್ಷಣವೇ ಇಲ್ಲಿಗೆ ಪ್ರತ್ಯೇಕ ಇನ್ಸ್‌ಪೆಕ್ಟರ್ ಮತ್ತು ಡಿಎಲ್‌ಒ (DLO) ಅಧಿಕಾರಿಗಳನ್ನು ನೇಮಕ ಮಾಡಬೇಕು. ಈ ಮೂಲಕ ಕಾರ್ಮಿಕ ಮಂಡಳಿಯು ಕೇವಲ ಕಾರ್ಮಿಕರ ಹಿತರಕ್ಷಣೆಗಾಗಿ ಮಾತ್ರ ಕೆಲಸ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಪ್ರಭು ಮೇಸ್ತ್ರಿ, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಹುಣಸೂರು ರಮೇಶ್, ತಾಲ್ಲೂಕು ಸಲಹೆ ಗೌರವಾಧ್ಯಕ್ಷ ಹೆಚ್.ಲಕ್ಷ್ಮಣ್, ತಾಲ್ಲೂಕು ಸಲಹೆಗಾರ ನವೀನ್ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ್, ತಾಳಗುಪ್ಪ ವಲಯ ಅಧ್ಯಕ್ಷ ಸುಬ್ರಹ್ಮಣ್ಯ, ತ್ಯಾಗರ್ತಿ ವಲಯ ಕಾರ್ಯದರ್ಶಿ ಅಮೀರ್ ಬಾಷಾ, ಕಾರ್ಗಲ್ ಮತ್ತು ಜೋಗ ವಲಯ ಅಧ್ಯಕ್ಷ ದಿನೇಶ್, ಉಳ್ಳೂರು ಸಂಚಾಲಕ ಕೇಶವ, ಬಸವರಾಜ, ಶಿವಕುಮಾರ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.








