ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಅಕ್ರಮದ ನೆಪದಲ್ಲಿ ಕಡುಬಡವರಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬಿಪಿಎಲ್ ಕಾರ್ಡ್ ಹೊಂದಿದವರು ವಾಹನ ಹೊಂದಿದ್ದಲ್ಲಿ ಅಂಥವರಿಗೆ ನೋಟಿಸ್ ನೀಡಿ ದುಬಾರಿ ದಂಡ ಹಾಗೂ ಕ್ರಿಮಿನಲ್ ಕೇಸ್ ಹಾಕುವುದಾಗಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸುಮಾರು 12,584 ಮಂದಿಗೆ ನೋಟಿಸ್ ನೀಡಿದ್ದು, ಈ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಬೆಂಗಳೂರಿನ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಎಂಬ ಸಂಸ್ಥೆಯು ಕಾನೂನು ಹೋರಾಟಕ್ಕೆ ಇಳಿದಿದೆ. ಮುಖ್ಯಮಂತ್ರಿ, ಆಹಾರ ಸಚಿವರು ಹಾಗೂ ಮುಖ್ಯಕಾರ್ಯದರ್ಶಿಗೆ ಸೋಮವಾರ ಪತ್ರ ಬರೆದು, ಬಡಪಾಯಿ ಜನರಿಗೆ ನೋಟೀಸ್ ತಿಳುವಳಿಕೆ ನೋಟಿಸ್ ನೀಡದೆ ಕಾನೂನು ಕ್ರಮ ಜರುಗಿಸದಂತೆ ಒತ್ತಾಯಿಸಿದೆ.
ಈ ಹಿಂದೆ ಜಿಂದಾಲ್ ಭೂ ಹಗರಣ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಕರ್ಮಕಾಂಡ ಸಹಿತ ಹಲವಾರು ಭ್ರಷ್ಟಾಚಾರ ಪ್ರಕರಣಗಳ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ್ದ ಕೆ.ಎ.ಪಾಲ್ ಮುಂದಾಳುತ್ವದ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಇದೀಗ ‘BPL’ ಅವಾಂತರ ವಿರುದ್ದ ಹೊಸ ಸಮರ ಆರಂಭಿಸಿದೆ.
ಏನಿದು BPL ಕಾರ್ಡ್ ಅವಾಂತರ
ಕಡುಬಡವರಿಗಾಗಿ ಬಿಪಿಎಲ್ ಪಡಿತರ ಚೀಟಿ ನೀಡಿರುವ ಸರ್ಕಾರ ಇದೀಗ ಆ ಕಾರ್ಡ್ ಹೊಂದಿದವರಿಗೆ ಕಿರುಕುಳ ನೀಡುತ್ತಿದೆ. ಬಡತನ ವಿಚಾರದಲ್ಲಿ ‘ಆದಾಯ ಮಿತಿ’ಯನ್ನು ಸ್ಪಷ್ಟವಾಗಿ ನಿರ್ಧರಿಸದ ಸರ್ಕಾರ ಕ್ಷುಲ್ಲಕ ನೆಪವೊಡ್ಡಿ ಕಡು ಬಡವರಿಗೆ ‘ದಂಡ’ದ ಶಿಕ್ಷೆ ನೀಡುತ್ತಿರುವ ಸಂಗತಿ ಇಂದಿನ ಪತ್ರಿಕಾ ವರದಿಗಳಿಂದ ಬಯಲಾಗಿದೆ. ಈ ವಿಚಾರದಲ್ಲಿ ಅಕ್ರಮಗಳ ಬಗ್ಗೆ ಅಧಿಕಾರಿಗಳೇ ಕರ್ತವ್ಯ ಲೋಪ ಎಸಗಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳುವ ಬದಲು ಬಡಜನರಿಗೆ ದಂಡದ ಶಿಕ್ಷೆ ನೀಡುವುದು ಯಾವ ನ್ಯಾಯ?
ಅಕ್ರಮ ಪಡಿತರ ಚೀಟಿ ಹೊಂದಿದವರ ಬಗ್ಗೆ ರಾಜ್ಯ ಸರ್ಕಾರವು ಪಟ್ಟಿ ಸಿದ್ದಪಡಿಸಿ, ಈ ಪೈಕಿ ರಾಜ್ಯದ 12,584 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂಬುದು ಮಾಧ್ಯಮ ವರದಿ. ಪಡಿತರ ಚೀಟಿದಾರರು ಈ ವರೆಗೆ ಪಡೆದ ಆಹಾರ ಸಾಮಾಗ್ರಿಗೆ ದಂಡ ವಸೂಲಿ ಮಾಡಲಾಗಿದೆ ಎಂಬ ಅಂಶವೂ ವರದಿಯಲ್ಲಿದೆ.
ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ, ಅಂಥವರು ದಂಡ ರಹಿತವಾಗಿ ಪಡಿತರ ಚೀಟಿಯನ್ನು ವಾಪಸ್ ಕೊಟ್ಟು, ರದ್ದು ಮಾಡಿಸುವಂತೆ ಸರ್ಕಾರ ಸೂಚಿಸಿತ್ತು. ಹಲವು ಬಾರಿ ಅವಕಾಶ ನೀಡಲಾಗಿದ್ದರೂ ರದ್ದು ಮಾಡದೇ ಸೌಲಭ್ಯ ಪಡೆಯುತ್ತಿರುವ ಅನರ್ಹ ಪಡಿತರ ಚೀಟಿದಾರರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬುದು ಸರ್ಕಾರದ ಸಮುಜಾಯಿಷಿ. ಇದೀಗ, 4 ಚಕ್ರ ವಾಹನ ಹೊಂದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರ ಕುಟುಂಬಗಳ ಕುರಿತು ಸಾರಿಗೆ ಇಲಾಖೆಯ ಮಾಹಿತಿ ಆಧರಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳ/ಆಹಾರ ಶಿರಸ್ತೇದಾರ/ನಿರೀಕ್ಷಕರ ಮೂಲಕ ಬಿಪಿಎಲ್ ಪಡಿತರ ಚೀಟಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ 3 ದಿನಗಳ ಒಳಗೆ ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಿ ದಂಡದ ಮೊತ್ತವನ್ನು ಪಾವತಿಸಬೇಕೆಂದು ಕಾರ್ಡುದಾರರರಿಗೆ ತಾಕೀತು ಮಾಡಲಾಗಿದೆ ಈ ಕುರಿತಂತೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಪರವಾಗಿ ಸಂಸ್ಥೆಯ ಮುಖ್ಯಸ್ಥ ಕೆ.ಎ.ಪಾಲ್, ಸರ್ಕಾರ ಇಟ್ಟಿರುವ ತಪ್ಪು ಹೆಜ್ಜೆ ಕುರಿತು ಸಿಎಂ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸದ್ದಾರೆ.
ಒಂದು ಕುಟುಂಬದಲ್ಲಿ ನಾಲ್ಕೈದು ಮಂದಿ ಸದಸ್ಯರಿರುವುದು ಸಹಜ. ಪಿಂಚಣಿ ಸಹಿತ ವಿವಿಧ ಮೂಲಗಳಿಂದ ಪ್ರತೀಯೊಬ್ಬರಿಗೂ ಒಂದಿಲ್ಲೊಂದು ಮೂಲದಿಂದ ಆದಾಯ ಇರುವುದೂ ಸಾಮಾನ್ಯ. ಈ ಆದಾಯವು ಸರ್ಕಾರ ನಿಗದಿ ಮಾಡಿರುವ ವರ್ಷಿಕ ಗರಿಷ್ಟ ಆದಾಯ ಮಿತಿಯನ್ನು (ರೂ.17,000) ಮೀರದಿರಲು ಸಾಧ್ಯವೇ? ಅಂದರೆ, ಗರಿಷ್ಠ ಆದಾಯ ಮಿತಿ ನಿಗದಿ ವಿಚಾರದಲ್ಲೇ ಗೊಂದಲ ಇರುವುದರಿಂದ ಈಗಿನ ನೋಟಿಸ್ ಜಾರಿಯ ಕ್ರಮವೂ ಸರಿಯಾದುದಲ್ಲ ಎಂದು ಸರ್ಜಾರದ ಗಮನ ಸೆಳೆದಿರುವ ಅವರು, ಕಡುಬಡವರು ಕಾರು ಹೊಂದಿರಬಾರದು ಎಂಬ ಷರತ್ತೂ ಸರಿಯಲ್ಲ. ಹಳೇ ಕಾಲದ ವಾಹನಗಳು ಈಗ ಸುಮಾರು 20 ಸಾವಿರ ರೂಪಾಯಿಗಳಿಗೆ ಸಿಗುತ್ತದೆ ಎಂದಾದರೆ ಅಂತಹಾ ವಾಹನಗಳನ್ನು ಸಾಲದ ರೂಪದಲ್ಲಿ ಪಡೆದ ಹಣದಲ್ಲಿ ಖರೀದಿಸಿದಲ್ಲಿ ತಪ್ಪೇನಿದೆ? ಕಾರು ಗಿಫ್ಟ್ ಮೂಲಕ ಸಿಕ್ಕಿದ್ದಲ್ಲಿ ಅದನ್ನೂ ಆದಾಯಕ್ಕೆ ಹೋಲಿಸುವುದೂ ಸರಿಯಾದ ಕ್ರಮವೇ? ಒಂದು ವೇಳೆ ಆದಾಯ ಹೆಚ್ಚಿದ್ದೇ ಆದಲ್ಲಿ, ವಾಹನಗಳನ್ನು ಹೊಂದಿದ್ದೇ ಆದಲ್ಲಿ ಅದನ್ನು ಪತ್ತೆ ಹಚ್ಚಿ ಬಿಪಿಎಲ್ ಕಾರ್ಡನ್ನು ರದ್ದುಪಡಿಸುವುದಕ್ಕೆ ಮೊದಲ ಆದ್ಯತೆ ನೀಡುವುದು ಅಧಿಕಾರಿಗಳ ಕರ್ತವ್ಯ. ಈ ಕರ್ತವ್ಯ ಲೋಪ ಎಸಗಿದವರ ವಿರುದ್ದ ಕ್ರಮ ಕೈಗೊಳ್ಳಬೇಕಿರುವುದು ಉನ್ನತ ಅಧಿಕಾರಿಗಳ ಮೊದಲ ಕರ್ತವ್ಯ ಎಂದಿದ್ದಾರೆ.
ಅಷ್ಟೇ ಅಲ್ಲ, ಈ ವರೆಗೂ ಸರ್ಕಾರವು ಮಾಧ್ಯಮ ಹೇಳಿಕೆ, ಸುತ್ತೋಲೆಗಳನ್ನು ಹೊರಡಿಸಿರಬಹುದೇ ಹೊರತು ಯಾರಿಗೂ ತಿಳುವಳಿಕೆ ಪತ್ರ ನೀಡಲಾಗಿಲ್ಲ. ದಂಡ / ಶಿಕ್ಷೆ ವಿಧಿಸುವಂತಹಾ ಕಾನೂನು ಕ್ರಮ ಕೈಗೊಳ್ಳುವ ಮೊದಲು ಕನಿಷ್ಠ 3 ಬಾರಿ ನೋಟಿಸ್ ನೀಡುವುದು ಅರ್ಥಪೂರ್ಣ. ಇದು ತುತ್ತಿನ / ಅನ್ನದ ವಿಚಾರ ಆಗಿರುವುದರಿಂದ ಸ್ಪಷ್ಟನೆ ನೀಡಲು ಕಡುಬಡವರಿಗೆ ಅವಕಾಶ ನೀಡುವುದೂ ಜನಹಿತ ನಡೆ. ಆದರೆ ಏಕಾಏಕಿ ನೋಟೀಸ್ ಜಾರಿ ಮಾಡಿ, 2-3 ದಿನಗಳಲ್ಲಿ ಕಚೇರಿಗೆ ಹಾಜರಾಗಿ ದಂಡ ಪಾವತಿಸಬೇಕೆಂದು ತಾಕೀತು ಮಾಡುವುದು ಹಾಗೂ ಕ್ರಮಿನಲ್ ಧಾವೆ ಹೂಡುವ ಬಗ್ಗೆ ಬೆದರಿಸುವುದು ಸರಿಯಾದ ಕ್ರಮವಲ್ಲ ಎಂದಿರುವ ಕೆ.ಎ.ಪಾಲ್, ನ್ಯಾಯಾಲಯದ ಅವೆಷ್ಟೋ ಆದೇಶಗಳನ್ನು ಅಧಿಕಾರಿಗಳು ಪಾಲಿಸದೆ ಇರುವುದರಿಂದಾಗಿ ತಮ್ಮ ಘನ ಸರ್ಕಾರವು ಶ್ರೀಮಂತರ ಪರ ನಿಂತಿದೆ ಎಂಬ ಆರೋಪ ಕೇಳಿಬರುತ್ತಿದೆ ಅಲ್ಲವೇ? ಎಸಿಬಿ ದಾಳಿಗೊಳಗಾದ ಅವರಷ್ಟೋ ಭ್ರಷ್ಠರು, ತನಿಖೆಯಲ್ಲಿನ ಲೋಪದಿಂದಾಗಿ ಕಾನೂನಿನ ಕುಣಿಕೆಯಿಂದ ಪಾರಾಗುತ್ತಿಲ್ಲವೇ? ಬಿಟ್ ಕಾಯಿನ್ ಅಕ್ರಮ, ಪಿಎಸ್ಐ ಅಕ್ರಮ, 40% ಕಮೀಷನ್ ಆರೋಪ ಹೀಗೆ ಅವೆಷ್ಟೋ ಹಗರಣಗಳಲ್ಲಿ ಆರೋಪಿಗಳನ್ನು ಪಾರು ಮಾಡುತ್ತಿರುವ ಸರ್ಕಾರವು ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವ ಕಡುಬಡವರ ಮೇಲೆ ದಂಡ/ ಶಿಕ್ಷೆ ವಿಧಿಸುತ್ತಿರುವುದು ಸರಿಯಾದ ಕ್ರಮವಲ್ಲ. ಒಂದು ವೇಳೆ ಇದೇ ರೀತಿಯ ನಡೆ ಮುಂದುವರಿಸಿದ್ದೇ ಆದಲ್ಲಿ, ‘ಬಡವರು ಬಡವರಾಗಿಯೇ ಉಳಿಯಬೇಕು’ ಎಂಬ ಸೂತ್ರವನ್ನು ತಮ್ಮ ಸರ್ಕಾರ ಹೊಂದಿದಂತಾಗುತ್ತದೆ. ಅಷ್ಟೇ ಅಲ್ಲ, ‘ಗರೀಬಿ ಹಟಾವೋ’ ಎಂಬ ಪ್ರಧಾನಿಯವರ ಘೋಷಣೆ ತಮಗೆ ಕೇಳಿಸುತ್ತಿಲ್ಲವೇ..? ಎಂಬ ಅನುಮಾನ ರಾಜ್ಯದ ಜನರನ್ನು ಕಾಡಬಹುದಾಗಿದೆ ಎಂದು ಎಚ್ಚರಿಸಿದ್ದಾರೆ.
ಬಿಪಿಎಲ್ ಕಾರ್ಡ್ ವಿಚಾರವು ಕಡುಬಡವರ ಅನ್ನದ ವಿಷಯವಾಗಿರುವುದರಿಂದ ಕಾರ್ಡ್ ಪಡೆದ ವ್ಯಕ್ತಿಗಳಿಂದ ತಪ್ಪಾಗಿದ್ದರೆ, ಅದನ್ನು ಸರಿಪಡಿಸಲು ಕಾಲಾವಕಾಶ ನೀಡಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಅನಂತರವೂ, ತಪ್ಪು ಮರುಕಳಿಸಿದ್ದರೆ ಅಂಥವರ ಕಾರ್ಡುಗಳನ್ನು ರದ್ದುಪಡಿಸಲಿ. ಈ ಬಗ್ಗೆ ಪರಿಶೀಲಿಸಿ ರಾಜ್ಯದ ನಾಗರಿಕರಿಗಾಗಿ ಜನಹಿತ ಕ್ರಮಕ್ಕೆ ಆದೇಶಿಸಬೇಕೆಂದು ಸಿಎಂ ಅವರನ್ನು ಒತ್ತಾಯಿಸಿದೆ.