ಶಿವಪುರಿ (ಮಧ್ಯಪ್ರದೇಶ): ಯೂಟ್ಯೂಬರ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ರಚನಾ ಗುರ್ಜರ್ ಅವರು ಇನ್ಸ್ಟಾಗ್ರಾಮ್ ರೀಲ್ನಲ್ಲಿ ಭಾರಿ ತೂಕದ ಚಿನ್ನದ ಆಭರಣಗಳನ್ನು ಪ್ರದರ್ಶಿಸಿದ ಕೇವಲ ಎರಡು ದಿನಗಳಲ್ಲೇ, ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿರುವ ಅವರ ಮನೆಯನ್ನು ಕಳ್ಳರು ದರೋಡೆ ಮಾಡಿದ್ದಾರೆ.
ನರ್ವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹನಿ ಖ್ಯಾವ್ಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳ್ಳರು ಮನೆಯ ಬೌಂಡರಿ ತಂತಿ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ಮುಖವಾಗಿ ತಿರುಗಿಸಿ ಸಾಕ್ಷ್ಯವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ.
ರಚನಾ ಗುರ್ಜರ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಆಸ್ತಿ-ಪಾಸ್ತಿ, ಚಿನ್ನಾಭರಣಗಳು ಮತ್ತು ಐಷಾರಾಮಿ ಗ್ರಾಮೀಣ ಜೀವನಶೈಲಿಯನ್ನು ಸದಾ ಪ್ರದರ್ಶಿಸುತ್ತಿದ್ದರು. ಘಟನೆಯ ಎರಡು ದಿನಗಳ ಹಿಂದೆಯಷ್ಟೇ ಅವರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪ್ರದರ್ಶಿಸುವ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರು. ಆದಾಗ್ಯೂ, ಈ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೂ ದರೋಡೆಗೂ ನೇರ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.
ಶುಕ್ರವಾರ ತಡರಾತ್ರಿ ಬೌಂಡರಿ ಗೋಡೆಯ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ ಅಪರಿಚಿತ ಕಳ್ಳರು, ರಚನಾ ಮತ್ತು ಅವರ ಪತಿ ಉದಲ್ ಸಿಂಗ್ ಗುರ್ಜರ್ ಮಲಗಿದ್ದಾಗ ಅವರ ಮಲಗುವ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ. ನಂತರ ಮನೆಯಲ್ಲಿದ್ದ ಬೀರು ಮತ್ತು ಬೀಗಗಳನ್ನು ಒಡೆದು 1.91 ಲಕ್ಷ ರೂ. ನಗದು, ಚಿನ್ನದ ಮಂಗಳಸೂತ್ರ, ನಾಲ್ಕು ಚಿನ್ನದ ಉಂಗುರಗಳು, ಬೆಳ್ಳಿಯ ಕಡಗ (ಕರ್ಧನಿ) ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಅಚ್ಚರಿಯೆಂದರೆ, ಕಳ್ಳರು ಮನೆಯಲ್ಲಿದ್ದ ಎನರ್ಜಿ ಡ್ರಿಂಕ್ಗಳ ಕ್ರೇಟ್ ಅನ್ನು ಕೂಡ ದೋಚಿದ್ದಾರೆ.
ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ರಚನಾ ಎದ್ದಾಗ ಕೋಣೆಯ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ ನಂತರ, ಬೀರುಗಳನ್ನು ಒಡೆದು ಸೊತ್ತುಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.
ದರೋಡೆಯ ನಂತರವೂ ರಚನಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಪೊಲೀಸ್ ತನಿಖೆಯ ಕುರಿತು ನಿರಂತರ ಅಪ್ಡೇಟ್ಗಳನ್ನು ನೀಡುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿರುವ ದೃಶ್ಯಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿರುವ ಅವರು, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚುವಂತೆ ಪೊಲೀಸರನ್ನು ಕೋರಿದ್ದಾರೆ. ದರೋಡೆಯಾದರು, ಅವರು ತಮ್ಮ ದಿನನಿತ್ಯದ ವಿಡಿಯೋಗಳನ್ನು ಮತ್ತು ಪ್ರಕರಣದ ಅಪ್ಡೇಟ್ಗಳನ್ನು ತಮ್ಮ ಅನುಯಾಯಿಗಳಿಗೆ ತಿಳಿಸುತ್ತಲೇ ಇದ್ದಾರೆ.
ಸದ್ಯ ಪೊಲೀಸರು ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.








