ಗಾಂಧಿನಗರ: ಗುಜರಾತ್ನಲ್ಲಿ ಮಾನವೀಯತೆಯನ್ನೇ ಮರೆತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಪತಿಯೊಬ್ಬ ತನ್ನ ಸ್ವಂತ ಪತ್ನಿಯನ್ನೇ ಕೇವಲ 50 ಸಾವಿರ ರೂಪಾಯಿಗೆ ಸ್ನೇಹಿತರಿಗೆ ಮಾರಾಟ ಮಾಡಿದ್ದಾನೆ. ಹಣದ ಆಸೆಗಾಗಿ ಹೆಂಡತಿಯನ್ನು ಮಾರಿದ ಪತಿಯ ಕ್ರೌರ್ಯಕ್ಕೆ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಷ್ಟಕ್ಕೆ ನಿಲ್ಲದ ಆತನ ಸ್ನೇಹಿತರು, ಆ ಮಹಿಳೆಯನ್ನು ಕೂಡಿಹಾಕಿ ಸತತ 10 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಭೀಕರ ಘಟನೆಯು ಮೇ ತಿಂಗಳ ಆರಂಭದಲ್ಲಿ ಗುಜರಾತ್ನ ಪಲನ್ಪುರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ‘ನಾಪತ್ತೆ’ ಪ್ರಕರಣದ ತನಿಖೆಯ ವೇಳೆ ಬಯಲಾಗಿದೆ. ಮೇ 11ರಂದು ಆರೋಪಿ ಪತಿಯೇ ಪೊಲೀಸ್ ಠಾಣೆಗೆ ಬಂದು, ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಪೊಲೀಸರು ಆತನ ದೂರನ್ನು ಸ್ವೀಕರಿಸಿ ತನಿಖೆ ಆರಂಭಿಸಿದ್ದರು. ಆದರೆ, ದೂರು ನೀಡಿದ ಕೇವಲ ಎರಡು ದಿನಗಳಲ್ಲೇ ಪತಿ ಕೂಡ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದನು. ಇದು ಪೊಲೀಸರಲ್ಲಿ ತೀವ್ರ ಅನುಮಾನವನ್ನು ಹುಟ್ಟುಹಾಕಿತು.
ಪೊಲೀಸರ ತನಿಖೆ: ಪತ್ನಿ ನಾಪತ್ತೆಯಾದ ಬೆನ್ನಲ್ಲೇ ಪತಿಯೂ ನಾಪತ್ತೆಯಾಗಿದ್ದರಿಂದ ಜಾಗೃತರಾದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಂತಿಮವಾಗಿ ತಲೆಮರೆಸಿಕೊಂಡಿದ್ದ ಪತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ಸತ್ಯಗಳು ಹೊರಬಂದವು. ಆತನ ಸುಳಿವನ್ನು ಆಧರಿಸಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ನರಕಯಾತನೆ ಅನುಭವಿಸುತ್ತಿದ್ದ ಸಂತ್ರಸ್ತ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದರು.
ಪೊಲೀಸರಿಂದ ರಕ್ಷಿಸಲ್ಪಟ್ಟ ಬಳಿಕ ಸಂತ್ರಸ್ತ ಮಹಿಳೆ ನೀಡಿರುವ ಹೇಳಿಕೆ ಪ್ರತಿಯೊಬ್ಬರ ಮೈ ಜುಂ ಎನಿಸುವಂತಿದೆ. “ನನ್ನ ಪತಿಯೇ ನನ್ನನ್ನು ಕೇವಲ 50 ಸಾವಿರ ರೂಪಾಯಿಗೆ ತನ್ನ ಸ್ನೇಹಿತರಿಗೆ ಮಾರಾಟ ಮಾಡಿದ್ದನು. ಆ ನಂತರ ಆತನ ಸ್ನೇಹಿತರು ನನ್ನನ್ನು ಒಂದು ಕಡೆ ಕೂಡಿಹಾಕಿ, ಸತತ 10 ದಿನಗಳ ಕಾಲ ನನ್ನ ಇಷ್ಟಕ್ಕೆ ವಿರುದ್ಧವಾಗಿ ಕ್ರೂರವಾಗಿ ನಿರಂತರ ಅತ್ಯಾಚಾರ ಎಸಗಿದ್ದಾರೆ” ಎಂದು ಮಹಿಳೆ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಾ ತನ್ನ ಮೇಲಾದ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾಳೆ.
ಪ್ರಸ್ತುತ ಪೊಲೀಸರು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ನಯವಂಚಕ ಪತಿ ಹಾಗೂ ಆತನಿಗೆ ಸಾಥ್ ನೀಡಿದ ಕಾಮುಕ ಸ್ನೇಹಿತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹೆಂಡತಿಯನ್ನೇ ವ್ಯಾಪಾರದ ವಸ್ತುವನ್ನಾಗಿಸಿದ ಪತಿಯ ಈ ವಿಕೃತ ಮನಸ್ಥಿತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.








