ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವದಂತಿಗಳು ತೀವ್ರ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ‘ಅಖಂಡ ಲಿಂಗಾಯತ’ ಟ್ವಿಟರ್ (X) ಪೇಜ್ ಮಾಡಿರುವ ಪೋಸ್ಟ್ ಒಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. “ಒಂದು ಯುಗ ಅಂತ್ಯಗೊಳ್ಳುತ್ತಿರುವಂತೆ ಕಾಣುತ್ತಿದೆ” ಎಂದು ಭಾವುಕವಾಗಿ ಬರೆಯುವ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಪಯಣ ಹಾಗೂ ಕೊಡುಗೆಯನ್ನು ಈ ಪೋಸ್ಟ್ನಲ್ಲಿ ಮುಕ್ತಕಂಠದಿಂದ ಶ್ಲಾಘಿಸಲಾಗಿದೆ.
ಕರ್ನಾಟಕ ರಾಜಕಾರಣದ ಧ್ರುವತಾರೆ, ಅಹಿಂದ ವರ್ಗಗಳ ಗಟ್ಟಿ ಧ್ವನಿ ಹಾಗೂ ರಾಜ್ಯ ಕಂಡ ಅತ್ಯಂತ ಪ್ರಭಾವಿ ಜನನಾಯಕರಲ್ಲಿ ಒಬ್ಬರಾದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳು ಸದ್ಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿವೆ. ಈ ಸುದ್ದಿ ಸುಳ್ಳಾಗಲಿ ಎಂದು ರಾಜ್ಯದ ಕೋಟ್ಯಂತರ ಜನತೆ ಹಾಗೂ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಶರಣರ ಸಿದ್ಧಾಂತಗಳ ಪ್ರಸಾರಕ್ಕೆ ಸಿದ್ದರಾಮಯ್ಯ ಅವರು ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಬೆಂಬಲಿಗರು ಸ್ಮರಿಸುತ್ತಿದ್ದಾರೆ.ಲಿಂಗಾಯತ ಸಮುದಾಯದ ಹೆಸರಿನಲ್ಲಿ ರಾಜಕಾರಣ ಮಾಡುವ ಹಲವು ನಾಯಕರಿಗಿಂತಲೂ ಮಿಗಿಲಾಗಿ, ಸಿದ್ದರಾಮಯ್ಯ ಅವರು ಶರಣರ ಕಲ್ಯಾಣ ಕ್ರಾಂತಿಯ ಆಶಯಗಳನ್ನು ಮುನ್ನೆಡೆಸಿದರು. ಜಗದ್ಗುರು ಬಸವಣ್ಣನವರ ತತ್ವಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡು, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಅವರು ನೀಡಿದ ಬೆಂಬಲವನ್ನು ಸಮುದಾಯವು ಎಂದಿಗೂ ಮರೆಯಲು ಸಾಧ್ಯವಿಲ್ಲ.
ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರವು ತುಂಬಲಾರದ ದೊಡ್ಡ ಶೂನ್ಯವನ್ನು ಸೃಷ್ಟಿಸಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಸಮಾಜವಾದಿ ಸಿದ್ಧಾಂತದ ಸ್ಪಷ್ಟತೆ ಹಾಗೂ ಜನಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಅವರಿಗಿದ್ದ ಬದ್ಧತೆಯನ್ನು ಮುಂಬರುವ ದಿನಗಳಲ್ಲಿ ಮತ್ತೊಬ್ಬ ನಾಯಕನಲ್ಲಿ ಕಾಣುವುದು ಅಪರೂಪ. ಅವರ ನಿರ್ಗಮನವು ಕರ್ನಾಟಕದ ಪ್ರಗತಿಪರ ರಾಜಕಾರಣಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸದ್ಯ ಹರಿದಾಡುತ್ತಿರುವ ಈ ರಾಜೀನಾಮೆ ವದಂತಿಗಳು ಕೇವಲ ರಾಜಕೀಯ ವಲಯದಲ್ಲಷ್ಟೇ ಅಲ್ಲದೆ, ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯಲ್ಲೂ ತಲ್ಲಣ ಮೂಡಿಸಿದೆ. ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.
Looks like an era is coming to an end. The most famous leader Karnataka has ever seen, Siddaramaiah, is resigning as per reports.
First, I sincerely hope that the news is not true. Your contribution to Lingayat religion & sharanas is way more than any so-called Lingayat leaders.… pic.twitter.com/DLyLJ3vQZN
— LINGAYATH OFFICIAL (@AkhandLINGAYATH) May 27, 2026








