ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಮಹೀಂದ್ರಾ ಥಾರ್ ವಾಹನವೊಂದು ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಂಧನೂರಿನ ಅರಗಿನಮರ ಕ್ಯಾಂಪ್ ನಿವಾಸಿ ಭೂಮಿಕಾ (17) ಮೃತಪಟ್ಟ ದುರ್ದೈವಿ. ಗಾಯಗೊಂಡ ವಿದ್ಯಾರ್ಥಿನಿಯರನ್ನು ಮೇಘನಾ, ಮಹೇಶ್ವರಿ ಮತ್ತು ಜಹೀದಾ ಎಂದು ಗುರುತಿಸಲಾಗಿದ್ದು, ಸದ್ಯ ಇವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಚಾಲಕ ವಾಹನವನ್ನು ಅಜಾಗರೂಕತೆಯಿಂದ ರಿವರ್ಸ್ ತೆಗೆಯಲು ಪ್ರಯತ್ನಿಸಿದ್ದಾನೆ.ನಿಯಂತ್ರಣ ತಪ್ಪಿದ ವಾಹನವು ಹಿಂಬದಿಯಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ವೇಗವಾಗಿ ಹರಿದಿದೆ. ಡಿಕ್ಕಿಯ ರಭಸಕ್ಕೆ ಭೂಮಿಕಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಅಪಘಾತದ ಭೀಕರ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜನರಲ್ಲಿ ನಡುಕ ಹುಟ್ಟಿಸುವಂತಿದೆ. ಚಾಲಕನ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ.
ಘಟನಾ ಸ್ಥಳಕ್ಕೆ ಸಿಂಧನೂರು ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಉಳಿದ ಮೂವರು ವಿದ್ಯಾರ್ಥಿನಿಯರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.








