ಶಿವಮೊಗ್ಗ : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಗೆ ಬೆಳೆ ವಿಮೆ ಯೋಜನೆಯಡಿ ನಿಗಧಿತ ಶುಲ್ಕ ಪಾವತಿಸಿ, ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ ರೈತರು ವೈಯಕ್ತಿಕ ನಷ್ಟ ಪರಿಹಾರಕ್ಕಾಗಿ ಆಗಸ್ಟ್ 16ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದ್ದಾರೆ.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ಪೂರ್ಣ ಪ್ರಮಾಣದ ಬೆಳೆ ಹಾನಿಗೊಳಗಾಗಿದ್ದಲ್ಲಿ ಅಂತಹ ರೈತರು ಸ್ಥಳೀಯ ಪ್ರಕೃತಿ ವಿಕೋಪ ಘಟಕದಡಿ ವಿಮಾ ಸಂಸ್ಥೆಯಿಂದ ಪರಿಹಾರಕ್ಕಾಗಿ ವಿಮೆಗೆ ನೋಂದಣಿ ಮಾಡಿಸಿದ ಸ್ವೀಕೃತಿ, ಪಹಣಿ ಮತ್ತು ಆಧಾರ್ ಕಾರ್ಡ್ನ ನಕಲು ಪ್ರತಿಯೊಂದಿಗೆ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮನವಿ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ.
ಪ್ರಸ್ತುತ ಈ ವಾರಾಂತ್ಯದಲ್ಲಿ ಸಾಲುಸಾಲು ಸರ್ಕಾರಿ ರಜಾ ದಿನಗಳಿರುವುದರಿಂದ ರೈತರು ಅರ್ಜಿ ಸಲ್ಲಿಸಲು ಅಡಚಣೆ ಉಂಟಾಗದಂತೆ ಹಾಗೂ ಅವರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಚೇರಿಯಲ್ಲಿದ್ದು, ರೈತರ ಅನುಕೂಲಕ್ಕೆ ಮಾಹಿತಿ ಒದಗಿಸುವಂತೆ ಹಾಗೂ ರಜಾ ದಿನದಲ್ಲಿಯೂ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ರೈತರು ತಮ್ಮ ಬೆಳೆ ಹಾನಿಯ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸುವವರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನಿಗಧಿತ ದಿನಾಂಕದೊಳಗಾಗಿ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿರುವ ಅವರು, ನಿಗಧಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿದ ರೈತರ ಮಾಹಿತಿಯನ್ನು ಪರಿಹಾರಕ್ಕಾಗಿ ವಿಮಾ ಸಂಸ್ಥೆಗೆ ಕಳುಹಿಸಿಕೊಡಲಾಗುವುದು. ವಿಮಾ ಸಂಸ್ಥೆಯು ಕ್ಷೇತ್ರಕ್ಕೆ ಭೇಟಿ ನೀಡಿ, ಬೆಳೆಹಾನಿಯ ಪ್ರಮಾಣವನ್ನು ಆಧರಿಸಿ ಪರಿಹಾರ ನಿರ್ಧರಿಸಿ ಪರಿಹಾರಧನ ನೀಡಲು ಕ್ರಮ ವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ಅಲ್ಲದೇ ಮೆಕ್ಕೆಜೋಳ ಬೆಳೆ ಹಾನಿಯಾಗಿರುವ ರೈತರು ಕೂಡಲೇ ತಮ್ಮ ಜಮೀನಿನ ಬೆಳೆ ವಿವರಗಳನ್ನು ರೈತರ ಬೆಳೆ ಸಮೀಕ್ಷೆ ಆ್ಯಪ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಅ್ಯಪ್ನಲ್ಲಿ ನೋಂದಣಿ ಮಾಡಿಸಿಕೊಂಡು ಬೆಳೆ ಬದಲಾವಣೆ ಮಾಡಿದಲ್ಲಿ ಅಂತಹ ಬೆಳೆಹಾನಿ ತಾಕುಗಳು ವಿಮಾ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದವರು ತಿಳಿಸಿದ್ದಾರೆ.
ಪ್ರಸ್ತುತ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಯಡಿ ಬೆಳೆ ವಿಮೆ ನೋಂದಾಯಿಸಿದ ರೈತರಿಗೆ ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ, ನೆರೆ, ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶದ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯು ಪ್ರಾರಂಭಿಕ ಇಳುವರಿಯ ಶೇ.50ಕ್ಕಿಂತ ಕಡಿಮೆಯಾಗಬಹುದಾದ ಸಂದರ್ಭದಲ್ಲಿ ವಿಮಾ ನಷ್ಟ ಮೌಲ್ಯಮಾಪನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾ ಮಟ್ಟದ ಜಂಟಿ ಸಮಿತಿಯನ್ನು ಈಗಾಗಲೇ ಆದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಜಿ.ಸಿ. ಪೂರ್ಣಿಮಾ, ತೋಟಗಾರಿಕೆ ಉಪನಿರ್ದೇಶಕ ಬಸವರಾಜಪ್ಪ, ವಿಮಾ ಕಂಪನಿಗಳ ಪ್ರತಿನಿಧಿಗಳು, ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ರೈತ ಪ್ರತಿನಿಧಿಗಳಾದ ಪ್ರಕಾಶ್, ಪ್ರೇಮಕುಮಾರಗೌಡ, ಚಂದ್ರಶೇಖರಮಲ್ಲಪ್ಪ, ಸಂಬಂಧಿತ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.