ನವದೆಹಲಿ:ಕೇಂದ್ರ ಸರ್ಕಾರವು ನೀತಿ ಆಯೋಗವನ್ನು ಪುನರ್ರಚಿಸಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಅಶೋಕ್ ಕುಮಾರ್ ಲಾಹಿರಿ ಅವರನ್ನು ಆಯೋಗದ ನೂತನ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ನೇಮಕಾತಿಯ ಬೆನ್ನಲ್ಲೇ ಲಾಹಿರಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸುಮಾರು ನಾಲ್ಕು ದಶಕಗಳ ಕಾಲ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಅಶೋಕ್ ಲಾಹಿರಿ ಅವರು ಸುಮನ್ ಬೆರಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ವೇಳೆ, ದೇಶದ ಆರ್ಥಿಕ ಪ್ರಗತಿ ಮತ್ತು ‘ವಿಕಸಿತ ಭಾರತ’ದ ಗುರಿ ತಲುಪಲು ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಅಶೋಕ್ ಲಾಹಿರಿ ಅವರು ಈ ಹಿಂದೆ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ (CEA) ಮತ್ತು 15ನೇ ಹಣಕಾಸು ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ಲಾಹಿರಿ ಅವರೊಂದಿಗೆ ವಿಜ್ಞಾನಿ ಗೋಬರ್ಧನ್ ದಾಸ್ ಅವರನ್ನು ಆಯೋಗದ ಪೂರ್ಣಕಾಲಿಕ ಸದಸ್ಯರನ್ನಾಗಿ ನೇಮಿಸಲಾಗಿದೆ.
“ಅಶೋಕ್ ಲಾಹಿರಿ ಅವರ ಜ್ಞಾನ ಮತ್ತು ಅನುಭವವು ಭಾರತದ ಸುಧಾರಣಾ ಪಥಕ್ಕೆ ಹೆಚ್ಚಿನ ಬಲ ನೀಡಲಿದೆ. ಅವರ ನೇತೃತ್ವದಲ್ಲಿ ನೀತಿ ಆಯೋಗವು ದೇಶದ ಅಭಿವೃದ್ಧಿಗೆ ಹೊಸ ವೇಗ ನೀಡುವ ವಿಶ್ವಾಸವಿದೆ,” ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.








