ಕಾಠ್ಮಂಡು: ಭಾರತದೊಂದಿಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ, ಚೀನಾ ಮತ್ತು ಯುಕೆಯ (ಬ್ರಿಟನ್) ಸಹಕಾರವನ್ನು ಪಡೆಯುವ ಕುರಿತು ನೇಪಾಳದ ಪ್ರಧಾನಿ ಚಿಂತನೆ ನಡೆಸಿದ್ದಾರೆ. ವಿಶೇಷವೆಂದರೆ, “ಭಾರತ ಮಾತ್ರವಲ್ಲ, ನೇಪಾಳ ಕೂಡ ಭಾರತದ ಭೂಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದೆ” ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಿರುವುದು ಭಾರಿ ಸಂಚಲನ ಮೂಡಿಸಿದೆ.
ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶಗಳ ಕುರಿತಾದ ಗಡಿ ವಿವಾದದ ಬಗ್ಗೆ ಮಾತನಾಡಿದ ಪ್ರಧಾನಿ, ಈ ವಿಷಯವನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಬಗೆಹರಿಸಬೇಕಿದೆ ಎಂದು ಪ್ರತಿಪಾದಿಸಿದರು.
“ಈ ವಿವಾದವು ಬ್ರಿಟಿಷ್ ಭಾರತದ ಕಾಲದಿಂದಲೂ ಉಳಿದುಕೊಂಡು ಬಂದಿದೆ. ಆದ್ದರಿಂದ, ಈ ವಿಷಯದಲ್ಲಿ ಇಂಗ್ಲೆಂಡ್ (ಬ್ರಿಟನ್) ಪಾಲ್ಗೊಳ್ಳಬೇಕು ಎಂಬುದು ನಮ್ಮ ಅಭಿಪ್ರಾಯ” ಎಂದು ಅವರು ತಿಳಿಸಿದರು. ಚೀನಾ ಮತ್ತು ಬ್ರಿಟನ್ ಜೊತೆಗೆ ಈ ಸಂಬಂಧ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಅವರು ಸುಳಿವು ನೀಡಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, “ಪ್ರಧಾನಿಯಾದ ನಂತರ ನನಗೆ ತಿಳಿದುಬಂದಿದ್ದೇನೆಂದರೆ, ಭಾರತ ಮಾತ್ರ ನೇಪಾಳದ ಭೂಮಿಯನ್ನು ಒತ್ತುವರಿ ಮಾಡಿಲ್ಲ; ನೇಪಾಳ ಕೂಡ ಭಾರತದ ಹಲವು ಪ್ರದೇಶಗಳನ್ನು ತನ್ನದಾಗಿಸಿಕೊಂಡಿದೆ. ಉಭಯ ದೇಶಗಳು ಕುಳಿತು ಈ ವಿಷಯವನ್ನು ಚರ್ಚಿಸಬೇಕು” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.








