ಮಡಿಕೇರಿ: ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಸಾಕಾನೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಇದೇ ಕಾಳಗದ ವೇಳೆ ಆನೆಗಳ ಕೆಳಗೆ ಸಿಲುಕಿ ಪ್ರವಾಸಿ ಮಹಿಳೆಯೊಬ್ಬರು ಸಹ ಮೃತಪಟ್ಟಿದ್ದಾರೆ.
ಈ ಅನಿರೀಕ್ಷಿತ ಮತ್ತು ಊಹಿಸಲೂ ಆಗದ ದುರ್ಘಟನೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ದಸರಾ ಆನೆ ‘ಕಂಜನ್’ಗೆ ಶಾಕ್: ಜಂಬೂಸವಾರಿಯಿಂದ ಕೊಕ್!
ಮಾರ್ತಾಂಡ ಆನೆಯ ಮೇಲೆ ದಾಳಿ ನಡೆಸಿ, ಸಾವಿಗೆ ಕಾರಣವಾದ ದಸರಾ ಆನೆ ‘ಕಂಜನ್’ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಇನ್ಮುಂದೆ ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಕಂಜನ್ ಆನೆಯನ್ನು ಬಳಸದಂತೆ ಸಚಿವ ಈಶ್ವರ ಖಂಡ್ರೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಮೂಲಕ ಕಂಜನ್ ಆನೆಯನ್ನು ದಸರಾ ಮಹೋತ್ಸವದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.
ಮೃತ ಆನೆಗಳ ಹಿನ್ನೆಲೆ ಮತ್ತು ತೂಕದ ವಿವರ:
-
ಮಾರ್ತಾಂಡ ಆನೆ: ಕಂಜನ್ ಮತ್ತು ಮಕನಾ ಆನೆಗಳ ನಡುವಿನ ಜಗಳದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ 53 ವರ್ಷ ವಯಸ್ಸಾಗಿತ್ತು. ಸುಮಾರು 4,500 ಕೆ.ಜಿ. ತೂಕ ಹೊಂದಿದ್ದ ಈ ಆನೆಯನ್ನು 2023 ರಲ್ಲಿ ಹಾಸನ ಜಿಲ್ಲೆಯ ಆಲೂರಿನಲ್ಲಿ ಸೆರೆಹಿಡಿಯಲಾಗಿತ್ತು.
-
ಕಂಜನ್ ಆನೆ: ದಾಳಿ ನಡೆಸಿದ ಕಂಜನ್ ಆನೆಗೆ 26 ವರ್ಷ ವಯಸ್ಸು. ಇದನ್ನು 2014 ರಲ್ಲಿ ಹಾಸನ ಜಿಲ್ಲೆಯ ಯಸಳೂರಿನ ಬಳಿ ಸೆರೆಹಿಡಿಯಲಾಗಿತ್ತು. ಇದುವರೆಗೆ ಸತತ 3 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿತ್ತು. ಆದರೆ ಪ್ರಸ್ತುತ ವರ್ತನೆಯ ಹಿನ್ನೆಲೆಯಲ್ಲಿ ಇದಕ್ಕೆ ದಸರಾದಿಂದ ಕೊಕ್ ನೀಡಲಾಗಿದೆ.
ಪ್ರವಾಸಿಗರಲ್ಲಿ ಆತಂಕ ಮೂಡಿಸಿದ ಘಟನೆ:
ದುಬಾರೆ ಆನೆ ಶಿಬಿರಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆನೆಗಳ ಕಾಳಗದ ತೀವ್ರತೆಗೆ ಸಿಲುಕಿ ಪ್ರವಾಸಿ ಮಹಿಳೆಯೇ ಪ್ರಾಣ ಕಳೆದುಕೊಂಡಿರುವುದು ಮತ್ತು ಸಾಕಾನೆಗಳಲ್ಲೇ ಅತ್ಯಂತ ಬಲಿಷ್ಠವಾಗಿದ್ದ ಮಾರ್ತಾಂಡ ಆನೆ ಸಾವನ್ನಪ್ಪಿರುವುದು ಪ್ರವಾಸಿಗರಲ್ಲಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ತೀವ್ರ ಆತಂಕ ಮತ್ತು ಆಘಾತವನ್ನು ಉಂಟುಮಾಡಿದೆ. ಘಟನೆಯ ಬೆನ್ನಲ್ಲೇ ಶಿಬಿರದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲೊಂದು ದಾರುಣ ಘಟನೆ: ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ದುರ್ಮರಣ
ಕೋಲಾರದಲ್ಲಿ ಬಂಡೆ ಬ್ಲಾಸ್ಟಿಂಗ್ ವೇಳೆ ಸಿಡಿಮದ್ದು ಸ್ಫೋಟ; ನಾಲ್ವರಿಗೆ ಗಂಭೀರ ಗಾಯ








