ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಹಾಗೂ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಬಿಸಿಸಿಐ (BCCI) ಮಂಗಳವಾರ ಭಾರತ ತಂಡವನ್ನು ಪ್ರಕಟಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಿರುವ ಈ ತಂಡದಲ್ಲಿ ಹಲವು ಅಚ್ಚರಿಯ ಬದಲಾವಣೆಗಳಾಗಿದ್ದು, ಸ್ಟಾರ್ ಆಟಗಾರ ರಿಷಭ್ ಪಂತ್ಗೆ ಭಾರಿ ಹಿನ್ನಡೆಯಾಗಿದೆ.
ಸರಣಿಯ ದೊಡ್ಡ ಸುದ್ದಿಯೆಂದರೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಏಕದಿನ (ODI) ತಂಡದಿಂದ ಕೈಬಿಡಲಾಗಿದೆ. ಅಷ್ಟೇ ಅಲ್ಲದೆ, ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೂ, ಅವರ ಬಳಿಯಿದ್ದ ಟೆಸ್ಟ್ ತಂಡದ ಉಪನಾಯಕತ್ವದ (Vice-Captain) ಜವಾಬ್ದಾರಿಯನ್ನು ಕಸಿದುಕೊಳ್ಳಲಾಗಿದೆ. ಇತ್ತೀಚಿನ ಫಾರ್ಮ್ ಕೊರತೆಯಿಂದಾಗಿ ಪಂತ್ ಈ ಸ್ಥಾನ ಕಳೆದುಕೊಂಡಿದ್ದು, ಅವರ ಬದಲಿಗೆ ಕೆ.ಎಲ್. ರಾಹುಲ್ ಅವರನ್ನು ಟೆಸ್ಟ್ ತಂಡದ ನೂತನ ಉಪನಾಯಕನನ್ನಾಗಿ ನೇಮಿಸಲಾಗಿದೆ. ಟೆಸ್ಟ್ ಮತ್ತು ಒನ್ಡೇ ಎರಡೂ ಮಾದರಿಗಳಿಗೆ ಶುಭ್ಮನ್ ಗಿಲ್ ನಾಯಕರಾಗಿದ್ದಾರೆ.
ಏಕದಿನ ತಂಡಕ್ಕೆ ರೋಹಿತ್ ಶರ್ಮಾ – ವಿರಾಟ್ ಕೊಹ್ಲಿ ಅಬ್ಬರದ ಪುನರಾಗಮನ
ಸೀಮಿತ ಓವರ್ಗಳ ಕ್ರಿಕೆಟ್ನಿಂದ ವಿಶ್ರಾಂತಿ ಪಡೆದಿದ್ದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದೀಗ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಕಂಬ್ಯಾಕ್ ಮಾಡಿದ್ದಾರೆ. ಆದರೆ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯು ಸಂಪೂರ್ಣವಾಗಿ ಬಿಸಿಸಿಐ ಫಿಟ್ನೆಸ್ ಪ್ರೋಟೋಕಾಲ್ ಮೇಲೆ ನಿರ್ಧಾರಿತವಾಗಿರುತ್ತದೆ ಎಂದು ತಿಳಿಸಲಾಗಿದೆ. ಇನ್ನು ಏಕದಿನ ತಂಡದ ಉಪನಾಯಕನಾಗಿ ಶ್ರೇಯಸ್ ಅಯ್ಯರ್ ನಿಯೋಜನೆಗೊಂಡಿದ್ದಾರೆ.
ಕಾರ್ಯದೊತ್ತಡ ನಿರ್ವಹಣೆ (Workload Management) ಹಿನ್ನೆಲೆಯಲ್ಲಿ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಅವರಿಗೆ ಈ ಸಂಪೂರ್ಣ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ದೇಶಿ ಕ್ರಿಕೆಟ್ನಲ್ಲಿ ಮಿಂಚಿದ ಯುವ ಆಟಗಾರರಾದ ಮಾನವ್ ಸುತಾರ್, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್ ಮತ್ತು ಹರ್ಷ್ ದುಬೆ ಅವರಿಗೆ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾ ಕರೆ ಸಿಕ್ಕಿದೆ. ಇನ್ನು ಏಕದಿನ ತಂಡಕ್ಕೆ ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಮರಳಿದ್ದಾರೆ.
ಭಾರತದ ಅಂತಿಮ ತಂಡಗಳು ಹೀಗಿವೆ:
ಟೆಸ್ಟ್ ತಂಡ (ಒಂದು ಪಂದ್ಯ):
ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್ (ಉಪನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಧ್ರುವ್ ಜುರೆಲ್.
ಏಕದಿನ ತಂಡ (ಮೂರು ಪಂದ್ಯಗಳು):
ಶುಭ್ಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್.








