ಕುಕನೂರು: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಅತ್ಯಂತ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ನಿವಾಸಿಗಳಾದ ಲಕ್ಷ್ಮವ್ವ ಹರಣಿಶಿಕಾರಿ ಮತ್ತು ಮುತ್ತವ್ವ ಹರಣಿಶಿಕಾರಿ ಎಂದು ಗುರುತಿಸಲಾಗಿದೆ.
ಬಟ್ಟೆ ತೊಳೆಯಲು ಹೋದಾಗ ಸಂಭವಿಸಿದ ದುರಂತ: ಬಾಲಕಿಯರಿಬ್ಬರು ಯರೇಹಂಚಿನಾಳ ಗ್ರಾಮದ ಬಳಿ ಇರುವ ಕೃಷಿ ಹೊಂಡಕ್ಕೆ ಬಟ್ಟೆ ತೊಳೆಯಲೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲುಜಾರಿ ಹೊಂಡದ ನೀರಿಗೆ ಬಿದ್ದಿದ್ದಾರೆ. ನೀರಿನ ಆಳ ಹೆಚ್ಚಾಗಿದ್ದರಿಂದ ಇಬ್ಬರಿಗೂ ಈಜಲು ಬಾರದೆ ಹೊಂಡದಲ್ಲೇ ಮುಳುಗಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಬಾಲಕಿಯರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಒಂದೇ ಗ್ರಾಮದ ಇಬ್ಬರು ಹೆಣ್ಣುಮಕ್ಕಳು ಈ ರೀತಿ ದುರ್ಮರಣಕ್ಕೀಡಾಗಿರುವುದು ಹೆತ್ತವರ ಒಡಲು ಸೀಳುವಂತೆ ಮಾಡಿದ್ದು, ತಿಮ್ಮಾಪುರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೋಲಾರದಲ್ಲಿ ಬಂಡೆ ಬ್ಲಾಸ್ಟಿಂಗ್ ವೇಳೆ ಸಿಡಿಮದ್ದು ಸ್ಫೋಟ; ನಾಲ್ವರಿಗೆ ಗಂಭೀರ ಗಾಯ
2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್








