ಬೆಂಗಳೂರು: ‘778 ಪಿಯು ಉಪನ್ಯಾಸಕರ ನೇಮಕಕ್ಕೆ ( PU College Lecturer Recruitment ) ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೂ ( Teacher Recruitment ) ಮುಂಬರುವ ದಿನಗಳಲ್ಲಿ ಒಪ್ಪಿಗೆ ಸಿಗುವ ವಿಶ್ವಾಸವಿದೆ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಎಲ್ಲ ರೀತಿಯ ಪ್ರಯತ್ನಗಳು ರಾಜ್ಯ ಸರ್ಕಾರ ಮಾಡಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ (ಸೆ.5) ನಡೆದ ಶಿಕ್ಷಕರ ದಿನಾಚರಣೆ ( Teacher Day 2022 ) ಮತ್ತು ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಚಿವ ನಾಗೇಶ್ ಅವರು ಮಾತನಾಡಿ, ದೇಶದ ಭವಿಷ್ಯವನ್ನು ಬರೆಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೋವಿಡ್-19 ಸಂದರ್ಭದಲ್ಲಿ ಮತ್ತು ನಂತರದ ದಿನಗಳಲ್ಲಿ ಶಿಕ್ಷಣದ ಮುಂದುವರಿಕೆ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
‘ಕೋವಿಡ್-19 ಕಾರಣ ಉಂಟಾದ ಕಲಿಕಾ ಹಿನ್ನಡೆ ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇಡೀ ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ಶಿಕ್ಷಣ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಕಲಿಕಾ ಚೇತರಿಕೆಗಾಗಿ ಬೇಸಿಗೆ ರಜೆ ಕಡಿತಗೊಳಿಸಿ 15 ದಿನಗಳ ಮೊದಲೇ ಶಾಲೆಗಳನ್ನು ಆರಂಭಿಸಲಾಯಿತು. ಶಿಕ್ಷಕರು ಸಂಪೂರ್ಣ ಸಹಕಾರ ನೀಡಿದರು. ಕೋವಿಡ್-19 ಸಂದರ್ಭದಲ್ಲಿ ಪರ್ಯಾಯ ಮಾರ್ಗಗಳಲ್ಲಿ ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಸರ್ಕಾರದಿಂದ ನೀಡಲಾದ ಹೆಚ್ಚುವರಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಶಿಕ್ಷಕರು ಶ್ರೇಷ್ಠ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಭವಿಷ್ಯದ ಪ್ರಜೆಗಳಿಗೆ ಪಾಠ ಮಾಡುವ ಮೂಲಕ ದೇಶದ ಭವಿಷ್ಯವನ್ನು ಬರೆಯುವವರು ಶಿಕ್ಷಕರು ಎಂದು ಭಾರತರತ್ನ ಸರ್ವೆಪಲ್ಲಿ ಡಾ. ರಾಧಕೃಷ್ಣನ್ ಅವರು ಹೇಳಿದ್ದಾರೆ. ಪ್ರತಿಯೊಬ್ಬ ಶಿಕ್ಷಕ/ಶಿಕ್ಷಕಿ ಕೂಡ ತೋರಿದ ಮಾರ್ಗದರ್ಶನದಲ್ಲಿ ನಡೆಯಬೇಕು. ನಮ್ಮ ರಾಜ್ಯದ ಶಿಕ್ಷಕರು ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಶಿಕ್ಷಕರ ಮನವಿಯಂತೆ 23 ಸಾವಿರ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಕೌನ್ಸಿಲಿಂಗ್ ದಿನವೇ ಆದೇಶ ಪ್ರತಿ ನೀಡಲಾಗಿದೆ. ಪಿಯು ಉಪನ್ಯಾಸಕರ ವರ್ಗಾವಣೆಯನ್ನು ಮಾಡಲಾಗುತ್ತದೆ. ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಬಡ್ತಿ ಪ್ರಕ್ರಿಯೆ ನಡೆಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸಗಳು ತ್ವರಿತಗತಿಯಲ್ಲಿ ನಡೆಸಲು, ಪಾರದರ್ಶಕತೆ ತರಲು ಹೊಸ ಪ್ರಯತ್ನಗಳನ್ನು ಮುಂಬರುವ ದಿನಗಳಲ್ಲಿ ಮಾಡಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
‘ಶಿಕ್ಷಕರ ಸಂಘಗಳ ಬೇಡಿಕೆ ಹಾಗೂ ವಿಧಾನ ಪರಿಷತ್ ಸದಸ್ಯರ ಕೋರಿಕೆಯಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರೀಕ್ಷೆ ಬದಲು ಜೇಷ್ಠತೆ ಆಧಾರದ ಮೇಲೆ ಪದೋನ್ನತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದು ಸಚಿವರು ಮಾಹಿತಿ ನೀಡಿದರು.
‘ಕೋವಿಡ್-19 ನಡುವೆಯು ಸುರಕ್ಷತಾ ಕ್ರಮಗಳೊಂದಿಗೆ ತರಗತಿಗಳ ಆರಂಭ, ಪರೀಕ್ಷೆಗಳು, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ, ಪ್ರವೇಶಾತಿ ಪ್ರಕ್ರಿಯೆಗಳು ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಶಿಕ್ಷಕರ ಸಮರ್ಥ ಸಹಕಾರದಿಂದ ಉತ್ತಮವಾಗಿ ನಡೆಸಲು ಸಾಧ್ಯವಾಯಿತು’ ಎಂದು ಸಚಿವರು ಹೇಳಿದರು.
‘ಶಿಕ್ಷಣ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿ ಏಕಕಾಲದಲ್ಲಿ 8,100 ಶಾಲಾ ಕೊಠಡಿಗಳ ನಿರ್ಮಾಣ, 15 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಶಿಕ್ಷಕರ ನೇಮಕ ಸಂಬಂಧಿಸಿದ ತಾತ್ಕಾಲಿಕ ಪಟ್ಟಿಯನ್ನು ಆದಷ್ಟು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ’ ಎಂದು ಸಚಿವರು ನುಡಿದರು.
‘778 ಪಿಯು ಉಪನ್ಯಾಸಕರ ನೇಮಕಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೂ ಮುಂಬರುವ ದಿನಗಳಲ್ಲಿ ಒಪ್ಪಿಗೆ ಸಿಗುವ ವಿಶ್ವಾಸವಿದೆ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಎಲ್ಲ ರೀತಿಯ ಪ್ರಯತ್ನಗಳು ರಾಜ್ಯ ಸರ್ಕಾರ ಮಾಡಲಿದೆ’ ಎಂದು ಸಚಿವರು ತಿಳಿಸಿದರು.
‘ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಅವಹೇಳನ ಮಾಡುವ ಪಾಠಗಳನ್ನು ಬ್ರಿಟಿಷರು ಪಠ್ಯದಲ್ಲಿ ಸೇರಿಸಿದ್ದರು. ಆದರೆ, ಸ್ವಾತಂತ್ರ್ಯದ ನಂತರವೂ ಅದನ್ನು ಬದಲಾಯಿಸದೇ ಮಕ್ಕಳಿಗೆ ಕಲಿಸಿಕೊಂಡು ಬರಲಾಗುತ್ತಿತ್ತು. ಇದು ನಮ್ಮ ನಾಡಿನ ದುರಂತ. ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರ ವಿಚಾರಗಳನ್ನು ಪಠ್ಯಕ್ಕೆ ಸೇರಿಸಿದರೆ ಅದನ್ನು ವಿರೋಧಿಸುವಂತಹ ಮನಸ್ಥಿತಿ ನಮ್ಮ ದೇಶದ ಕೆಲವರಲ್ಲಿ ಮನೆ ಮಾಡಿರುವುದು ದುರಾದೃಷ್ಟಕರ. ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳ ಬಳಿಕ ಸ್ವಾಮಿ ವಿವೇಕಾನಂದ ಸೇರಿದಂತೆ ಅನೇಕ ಮಹನೀಯರ ಕಂಡ ಕನಸಿನ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲಕ ಅನುಷ್ಠಾನಗೊಳಿಸುತ್ತಿದೆ’ ಎಂದು ಸಚಿವ ನಾಗೇಶ್ ಹೇಳಿದರು.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ
‘ಕೇಂದ್ರ ಸರ್ಕಾರ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ ನೀಡಿದ ಬಳಿಕ ‘ರಾಜ್ಯ ಪಠ್ಯಕ್ರಮ ಚೌಕಟ್ಟು’ ರಚಿಸಿ, ಬಳಿಕ ಪಠ್ಯಕ್ರಮ ಅಂತಿಮಗೊಳಿಸಿ ಇದೇ ವರ್ಷದಿಂದ ಪೂರ್ವ ಬಾಲ್ಯಾವಸ್ಥೆ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತದೆ’ ಎಂದು ಸಚಿವ ನಾಗೇಶ್ ಹೇಳಿದರು.
‘ಹೊಸ ಖಾಸಗಿ ಶಾಲೆಗಳನ್ನು ನೋಂದಣಿ ಮಾಡಿಕೊಳ್ಳಲು ನೀಡಲಾಗಿದ್ದ ದಿನಾಂಕವನ್ನು ಹಲವು ಬಾರಿ ವಿಸ್ತರಿಸಿ ಕಾಲಾವಕಾಶ ನೀಡಲಾಗಿದೆ. ಆದರೂ, ಕೆಲವು ಶಾಲೆಗಳು ನೋಂದಣಿ ಮಾಡಿಕೊಳ್ಳಲು ವಿಫಲವಾದವು. ಅಂತಹ ಶಾಲೆಗಳಿಗೆ ಮಕ್ಕಳು ಪ್ರವೇಶ ಪಡೆದು ತೊಂದರೆ ಅನುಭವಿಸಬಾರದು ಎಂದು ಅಂತಹ ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಆದರೆ, ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಲಾದ ಈ ಕ್ರಮದ ವಿರುದ್ಧ ಶಿಕ್ಷಣ ಇಲಾಖೆಯ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ’ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
‘2014-15ರಲ್ಲಿ ನಡೆದ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಕಷ್ಟಪಟ್ಟು ಓದಿದವರಿಗೆ ಅನ್ಯಾಯವಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಚಿವರು ಹೇಳಿದರು.
‘ರಿಯಲ್ ಎಸ್ಟೇಟ್, ಭೂ ಮಾಫಿಯಾಗಳು ಸರ್ಕಾರಿ ಶಾಲೆಗಳ ಆಸ್ತಿ ಕಬಳಿಕೆಗೆ ಕಣ್ಣು ಹಾಕಿದ್ದವು. ಹೀಗಾಗಿ, ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಆಸ್ತಿ ಮೇಲೆ ಕಣ್ಣು ಹಾಕಿರುವವರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳೇ ಆಗಿರಲಿ ಬಿಡುವುದಿಲ್ಲ. ಶಾಲೆಗಳ ಆಸ್ತಿಯನ್ನು ಶಿಕ್ಷಣ ಇಲಾಖೆಗೆ ನೋಂದಣಿ ಮಾಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳು ಮಾಡಲಾಗುತ್ತದೆ. ಒಂದಿಂಚೂ ಜಾಗವನ್ನು ಬಿಡುವುದಿಲ್ಲ’ ಎಂದು ಸಚಿವರು ಹೇಳಿದರು.
‘ಖಾಸಗಿ ಶಾಲೆಗಳಲ್ಲಿ ಅಗ್ನಿ ಮತ್ತು ಕಟ್ಟಡ ಸುರಕ್ಷತೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸಣ್ಣ ಖಾಸಗಿ ಶಾಲೆಗಳಿಗೆ ತೊಂದರೆಯಾಗದಂತೆ ಸುರಕ್ಷತಾ ಪ್ರಮಾಣಪತ್ರ ಪಡೆಯುವ ಸರಳೀಕರಣ ಪ್ರಕ್ರಿಯೆ ನಡೆಸಲಾಗಿದೆ’ ಎಂದು ಸಚಿವರು ತಿಳಿಸಿದರು.
‘ಶಾಲೆ ಆರಂಭಿಸಲು ಬೇಕಾಗುವ ನಿರಾಪೇಕ್ಷಣಾ ಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ಕೆಲವು ಲೋಪಗಳು ಆಗಿವೆ. ನಕಲಿ ನಿರಾಪೇಕ್ಷಣಾ ಪತ್ರ ಪಡೆಯಲಾಗಿದೆ ಎನ್ನುವ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿನ ಲೋಪ-ದೋಷಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಸಚಿವರು ಹೇಳಿದರು.
‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ, ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಪರಿಶೀಲಿಸಿ, ವಿಚಾರಣೆ ಮಾಡಲು ಆಯೋಗ/ಸಮಿತಿ ರಚಿಸುವ ಆಲೋಚನೆ ಇದೆ. ವಿಚಾರಣೆ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಚಿವರು ನುಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಡಿ.ಎಸ್. ಅರುಣ್, ಶಾಂತರಾಮ ಸಿದ್ಧಿ, ಪ್ರತಾಪ ಸಿಂಹ ನಾಯಕ್, ಆ. ದೇವೇಗೌಡ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಡಾ. ಆರ್. ವಿಶಾಲ್, ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಆರ್.ರಾಮಚಂದ್ರನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಖಾಸಗಿ ಶಾಲೆ ಶಿಕ್ಷಕರಿಗೂ ಪ್ರಶಸ್ತಿ
ಸರ್ಕಾರಿ ಶಾಲೆಗಳ ಶಿಕ್ಷಕರಾಗಲಿ, ಖಾಸಗಿ ಶಾಲಾ ಶಿಕ್ಷಕರಾಗಲಿ ಎಲ್ಲರೂ ಒಂದೇ. ಸಾಕಷ್ಟು ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಧನೆ ಮಾಡಿದ್ದಾರೆ. ಅವರನ್ನು ಕೂಡ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ನಾಗೇಶ್ ಅವರು ತಿಳಿಸಿದರು.
ಶಿಕ್ಷಕರು, ಉಪನ್ಯಾಸಕರಿಗೆ ಪ್ರಶಸ್ತಿ
ಪ್ರಾಥಮಿಕ ಶಾಲೆಯ ಶಿಕ್ಷಕರು, ಪ್ರೌಢಶಾಲೆಗಳ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಸ್ವಾಭಿಮಾನಿ ಶಾಲೆಯ 8 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಇಬ್ಬರು ಶಿಕ್ಷಕರಿಗೂ ಸಚಿವರು ಅಭಿನಂದನೆ ತಿಳಿಸಿದರು.